ಬೀಜಿಂಗ್ (ಚೀನಾ): ಹಾಂಕಾಂಗ್ ಜನರಿಗೆ ತಾತ್ಕಾಲಿಕ ಆಶ್ರಯ ನೀಡುವ ಅಮೆರಿಕ ಪ್ರಸ್ತಾಪದ ವಿರುದ್ಧ ಚೀನಾದ ವಿದೇಶಾಂಗ ಸಚಿವಾಲಯ ಸಿಡಿದೆದ್ದಿದೆ. ಇದು ಅರೆ ಸ್ವಾಯತ್ತ ದಕ್ಷಿಣ ನಗರ ಮತ್ತು ಚೀನಾದ ಕೇಂದ್ರ ಸರ್ಕಾರವನ್ನು "ಕಳಂಕಗೊಳಿಸುವ ವ್ಯರ್ಥ ಪ್ರಯತ್ನ" ಎಂದು ಅಮೆರಿಕವನ್ನ ಚೀನಾ ಟೀಕಿಸಿದೆ.
ಹಾಂಕಾಂಗ್ನಲ್ಲಿ ಚೀನಾ ತನ್ನ ನಿಯಂತ್ರಣವನ್ನು ಬಿಗಿಗೊಳಿಸಲು ಕ್ರಮಕೈಗೊಂಡ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಪ್ರಸ್ತಾಪ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಚೀನಾದ ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ.
ಹಾಂಕಾಂಗ್‌ನ ವಿಶಾಲವಾದ ಹೊಸ ರಾಷ್ಟ್ರೀಯ ಭದ್ರತಾ ಕಾನೂನು ಮತ್ತು ಇತರ ಕ್ರಮಗಳಿಗೆ ನೇರ ಪ್ರತಿಕ್ರಿಯೆಯಾಗಿ ಅಮೆರಿಕದಲ್ಲಿ ವಾಸಿಸುತ್ತಿರುವ ಹಾಂಕಾಂಗ್‌ನ ಜನರು 18 ತಿಂಗಳ ಕಾಲ ದೇಶದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಒಪ್ಪಿಗೆ ನೀಡಿ ಬೈಡನ್ ಸಹಿ ಹಾಕಿದ್ದರು.
ಅಮೆರಿಕ ವಿರುದ್ಧ ಚೀನಾ ಕೆಂಡಾಮಂಡಲ
ಬೈಡನ್ ಅವರ ಕ್ರಮವು ಹಾಂಕಾಂಗ್‌ನ ರಾಷ್ಟ್ರೀಯ ಭದ್ರತಾ ಕಾನೂನನ್ನು ಅಪಪ್ರಚಾರ ಮಾಡಿದೆ. ಹಾಂಕಾಂಗ್ ವ್ಯವಹಾರಗಳಲ್ಲಿ ಹಾಗೂ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿದೆ, ಅಂತಾರಾಷ್ಟ್ರೀಯ ಕಾನೂನು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಮೂಲ ಮಾನದಂಡಗಳನ್ನು ಸ್ಪಷ್ಟವಾಗಿ ದಾಟಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.