ಬೀಜಿಂಗ್(ಚೀನಾ) : ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಸಂಘರ್ಷಕ್ಕೆ ಕೆಲ ದಿನಗಳಿಗೂ ಮೊದಲು ಚೀನಾ, ಗಡಿಭಾಗದ ಬಳಿ ಮಾರ್ಷಲ್ ಆರ್ಟ್ಸ್ ಫೈಟರ್ಗಳನ್ನು ಕಳುಹಿಸಿತ್ತು ಎಂದು ಬೀಜಿಂಗ್ ಮಾಧ್ಯಮಗಳು ಹೇಳುತ್ತಿವೆ.
ಮೌಂಟ್ ಎವರೆಸ್ಟ್ ಒಲಿಂಪಿಕ್ ಟಾರ್ಚ್ ರಿಲೇ ತಂಡದ ಮಾಜಿ ಸದಸ್ಯರು ಮತ್ತು ಮಿಶ್ರ ಸಮರ ಕಲೆಗಳ ಕ್ಲಬ್‌ನ ಹೋರಾಟಗಾರರು ಸೇರಿದಂತೆ ಐದು ಹೊಸ ಮಿಲಿಷಿಯಾ (ತುರ್ತು ಸಮಯದಲ್ಲಿ ಕರೆಯಲ್ಪಡುವ ಸಾಮಾನ್ಯ ನಾಗರಿಕರಿಂದ ಮಾಡಲ್ಪಟ್ಟ ಸೈನ್ಯ) ವಿಭಾಗಗಳು ಜೂನ್ 15 ರಂದು ಲಾಸಾದಲ್ಲಿ ತಪಾಸಣೆಗಾಗಿ ಹಾಜರಾಗಿದ್ದವು ಎಂದು ಚೀನಾ ನ್ಯಾಷನಲ್ ಡಿಫೆನ್ಸ್ ನ್ಯೂಸ್ ವರದಿ ಮಾಡಿದೆ.
ಜೂನ್ 15 ರ ಮಧ್ಯರಾತ್ರಿ ಭಾರತ-ಚೀನಾ ಗಡಿ ಪ್ರದೇಶದಲ್ಲಿ ನಡೆದಿದ್ದ ಘರ್ಷಣೆ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾದ ಯೋಧರು ಕೂಡಾ ಘಟನೆಯಲ್ಲಿ ಸಾವನ್ನಪ್ಪಿದ್ದರು ಎಂಬ ಮಾಹಿತಿ ಇದೆ. ಆದರೆ, ಇದುವರೆಗೂ ಚೀನಾ ಸಾವು-ನೋವಿನ ಬಗ್ಗೆ ನಿಖರವಾಗಿ ಮಾಹಿತಿ ನೀಡಿಲ್ಲ.