ಬೀಜಿಂಗ್: ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೋವಿಡ್ ಬಗ್ಗೆ ಪ್ರತ್ಯಕ್ಷ ವರದಿ ಮಾಡಿದ್ದ ನಾಗರಿಕ ಪತ್ರಕರ್ತೆ ಜಾಂಗ್ ಜಾನ್ (37) ಅವರಿಗೆ ಇಂದು ಚೀನಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಹಾಂಗ್ ಕಾಂಗ್ ಫ್ರೀ ಪ್ರೆಸ್ (ಎಚ್‌ಕೆಎಫ್‌ಪಿ) ವರದಿ ಮಾಡಿದೆ.
ಜಾಗತಿಕ ಮಹಾಮಾರಿ ಕೊರೊನಾ ವೈರಸ್ ಕಳೆದ ವರ್ಷ ವುಹಾನ್ನಲ್ಲೆ ಮೊದಲು ಪತ್ತೆಯಾಗಿತ್ತು. ಆರಂಭಿಕ ದಿನಗಳಲ್ಲಿ ಜಾಂಗ್ ಜಾನ್ ಪ್ರತ್ಯಕ್ಷ ವರದಿ ಮಾಡುತ್ತಿದ್ದರು. ಗಲಾಟೆ, ಗೊಂದಲ ಮತ್ತು ತೊಂದರೆಗಳಿಗೆ ಇವರ ವರದಿ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿ ಜಾಂಗ್ ಜಾನ್ರನ್ನು ಮೇ ತಿಂಗಳಲ್ಲಿ ಬಂಧಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ಇಂದು ನಡೆಯುತ್ತಿದೆ ಎಂದು ತಿಳಿದ ಜಾಂಗ್ ಜಾನ್ರ ಬೆಂಬಲಿಗರು, ಪತ್ರಕರ್ತರು ಶಾಂಘೈ ಕೋರ್ಟ್ ಮುಂದೆ ನೆರೆದಿದ್ದರು. ಆದರೆ ಇವರನ್ನು ಪೊಲೀಸರು ಪ್ರವೇಶದ್ವಾರದಿಂದ ತಳ್ಳಿ ಹೊರಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಚೀನಾದ ಅಪರಾಧ ಕಾನೂನಿನಲ್ಲಿನ ತಿದ್ದುಪಡಿ: ಬಾಲಾಪರಾಧ ತಡೆಯಲು ಕ್ರಮ
ಮಾಜಿ ವಕೀಲರೂ ಆಗಿರುವ ಜಾಂಗ್ ಜಾನ್ ಜೂನ್‌ನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇವರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆಯೇ ಮೂಗಿನ ಕೊಳವೆಯ ಮೂಲಕ ಬಲವಂತವಾಗಿ ಆಹಾರ ನೀಡಲಾಗುತ್ತಿದೆ ಎಂದು ಜಾಂಗ್ ಪರ ವಕೀಲರು ಆರೋಪಿಸಿದ್ದಾರೆ.
ಕೋವಿಡ್-19 ನ ಮೂಲದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಅಂತಾರಾಷ್ಟ್ರೀಯ ತಂಡವು ಚೀನಾಕ್ಕೆ ಬರುವ ನಿರೀಕ್ಷೆಯಿದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಇಂದು ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ.