ಕಾಬೂಲ್: ಉತ್ತರ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 100ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.
ಕುಂಡ್ಸ್ ಪ್ರಾಂತ್ಯದ ಶಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನಾ ಸೇವೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಗೋಝಾರ್ - ಇ - ಸಾಯಿದ್ ಅಬಾದ್ ಮಸೀದಿಯಲ್ಲಿ ಶಿಯಾ ಮುಸ್ಲಿಮರು ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೂಜೆಗೆ ಬರುತ್ತಿದ್ದರು. ಪ್ರಾರ್ಥನೆ ವೇಳೆ ಸ್ಫೋಟವಾಗಿ ಅನೇಕ ಸಾವು ನೋವು ಸಂಭವಿಸಿದೆ ಎಂದು ಅಲ್ಲಿಗೆ ಬಂದಿದ್ದ ಅಲಿ ರೆಜಾ ಹೇಳಿದ್ದಾರೆ.
ಸ್ಫೋಟ ಸಂಬಂಧ ಅನೇಕ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನೆಲಸಮಗೊಂಡಿರುವ ಮಸೀದಿ, ಭಕ್ತರ ದೇಹವನ್ನು ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಚೀನಾಗೆ ಹೆಚ್ಚಿನ ಶ್ರೇಯಾಂಕ ನೀಡಲು ಒತ್ತಡ ಆರೋಪ ; ವಿಚಾರಣೆಗೆ ಹಾಜರಾದ IFM ಮುಖ್ಯಸ್ಥೆ
ತಾಲಿಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಾಹಿತಿ ನೀಡಿದ್ದು, ಶಿಯಾ ಮಸೀದಿ ಗುರಿಯಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ತಾಲಿಬಾನ್ ವಿಶೇಷ ಪಡೆಗಳು ಘಟನಾ ಸ್ಥಳಕ್ಕೆ ತಲುಪಿ ಘಟನೆಯ ಬಗ್ಗೆ ತನಿಖೆ ನಡೆಸುತ್ತಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದರು. ಸದ್ಯ ಸ್ಫೋಟಕ್ಕೆ ಕಾರಣ ಸ್ಪಷ್ಟವಾಗಿಲ್ಲ ಮತ್ತು ಯಾರು ಈ ಕೃತ್ಯ ನಡೆಸಿದ್ದಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ.