ಢಾಕಾ(ಬಾಂಗ್ಲಾದೇಶ): ದುರ್ಗಾ ಪೂಜೆ ಆಚರಣೆಯ ವೇಳೆ ಹಿಂಸಾಚಾರ ಸೃಷ್ಟಿಸಿದವರನ್ನು ಸೆರೆಹಿಡಿದು, ಸೂಕ್ತ ಶಿಕ್ಷೆ ನೀಡಲಾಗುತ್ತದೆ. ಕೋಮುವಾದಿ ಚಟುವಟಿಕೆಗಳನ್ನು ತಡೆಯಲು ಈ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭರವಸೆ ನೀಡಿದರು.
ಚಿತ್ತಗಾಂಗ್ ವಿಭಾಗದಲ್ಲಿ ಬರುವ ಕುಮಿಲ್ಲಾ ಜಿಲ್ಲೆಯಲ್ಲಿ ದುರ್ಗಾಪೂಜೆ ವೇಳೆಯಲ್ಲಿ ಅಪರಿಚಿತ ವ್ಯಕ್ತಿಗಳು ಧಾವಿಸಿ, ಅಲ್ಲಿನ ದೇವಾಲಯದಲ್ಲಿದ್ದ ಹಿಂದೂ ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು. ಈ ಘಟನೆಯ ನಂತರ ನಡೆದ ಹಿಂಸಾಚಾರಗಳಲ್ಲಿ ಸುಮಾರು ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.
ಈ ಘಟನೆಯ ನಂತರ ಬಾಂಗ್ಲಾದೇಶದ ಹಲವು ಜಿಲ್ಲೆಗಳಲ್ಲೂ ಕೂಡಾ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಈ ಹಿಂಸಾಚಾರವನ್ನು ತಡೆದು, ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ 22 ಜಿಲ್ಲೆಗಳಲ್ಲಿ ಬಾಂಗ್ಲಾದೇಶ ಸರ್ಕಾರ ರ್‍ಯಾಪಿಡ್ ಆಕ್ಷನ್ ಬೆಟಾಲಿಯನ್, ಬಾರ್ಡರ್ ಗಾರ್ಡ್ ಬಾಂಗ್ಲಾದೇಶವನ್ನು ನಿಯೋಜಿಸಿದೆ.
ಚಂದ್‌ಪುರದ ಹಾಜಿಗಂಜ್, ಚಟ್ಟೋಗ್ರಾಮ್‌ನ ಬಂಶಖಾಲಿ ಮತ್ತು ಕಾಕ್ಸ್ಬಜಾರ್ನ ಪೆಕುವಾದಲ್ಲಿನ ಹಿಂದೂ ದೇವಾಲಯಗಳಿಂದಲೂ ವಿಧ್ವಂಸಕ ಘಟನೆಗಳು ವರದಿಗಳಾಗಿವೆ. ಡಾಕಾ ಟ್ರಿಬ್ಯೂನ್ ಪತ್ರಿಕೆ ಹೇಳುವ ಪ್ರಕಾರ ಒಂದು ಹಂತದಲ್ಲಿ ಗಲಭೆ ಕೈ ಮೀರಿದ್ದು, ಸ್ಥಳೀಯವಾಗಿ ದುರ್ಗಾಪೂಜೆ ನಡೆಯುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಬಂದ ಪೊಲೀಸರ ಮೇಲೆಯೂ ಹಲ್ಲೆ ಮಾಡಲಾಗಿದೆ. ಸ್ಥಳೀಯ ಆಡಳಿತಗಳು ಮನವಿ ಮಾಡಿದರೆ, ಬೇರೆಡೆಗೂ ಅರೆ ಸೇನಾ ಪಡೆಯನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸದ್ಯಕ್ಕೆ ಕುಮಿಲ್ಲಾ ಸಿಟಿಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 43 ಮಂದಿಯನ್ನು ಬಂಧಿಸಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವ್ಯಕ್ತಿಯೊಬ್ಬರಿಗೆ ಬಂಗಲೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಮಹಾ ಸರ್ಕಾರದ ಸಚಿವರಿಗೆ ಜಾಮೀನು