ವಾಷಿಂಗ್ಟನ್: ಮಾರಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಏಷ್ಯಾ ವಿಶ್ವದ ಇತರ ಪ್ರದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಏಷ್ಯಾ ಆದಷ್ಟು ವೇಗವಾಗಿ ಚೇತರಿಸಿಕೊಳ್ಳಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಚಾಂಗ್ ಯೋಂಗ್ ರೀ, ಏಷ್ಯಾ ಇತರ ಪ್ರದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಚೇತರಿಕೆಯ ಸರಾಸರಿಯಲ್ಲಿ ಇತರ ಪ್ರದೇಶಗಳಿಗಿಂತ ಏಷ್ಯಾ ಮುಂದಿದೆ ಎಂದಿದ್ದಾರೆ.
ಕೊರೊನಾ ಕಾರಣದಿಂದ 2020 ರಲ್ಲಿ ಏಷ್ಯಾದ ಬೆಳವಣಿಗೆ ಶೂನ್ಯಕ್ಕೆ ತಲುಪಲಿದೆ, ಎಂದು ನಾವು ನಿರೀಕ್ಷಿಸುತ್ತೇವೆ. ಕಳೆದ 60 ವರ್ಷಗಳಲ್ಲಿ ಏಷ್ಯಾ ಶೂನ್ಯ ಬೆಳವಣಿಗೆಯನ್ನು ಅನುಭವಿಸದ ಕಾರಣ ಇದು ಗಮನಾರ್ಹವಾದ ಡೌನ್ಗ್ರೇಡ್ ಆಗಿದೆ ಎಂದಿದ್ದಾರೆ. ಇದು ಜಾಗತಿಕ ಹಣಕಾಸು ಬಿಕ್ಕಟ್ಟು (ಶೇ 4.7) ಅಥವಾ ಏಷ್ಯನ್ ಹಣಕಾಸು ಬಿಕ್ಕಟ್ಟು (ಶೇಕಡಾ 1.3) ವಾರ್ಷಿಕ ಸರಾಸರಿ ಬೆಳವಣಿಗೆಯ ದರಗಳಿಗಿಂತ ಕಡಿಮೆಯಾಗಿದೆ ಎಂದಿದ್ದಾರೆ.
ಇತರ ದೇಶಗಳಿಗಿಂತ ಮೊದಲು ಏಷ್ಯಾದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಮೊದಲೇ ಚೇತರಿಕೆ ಪ್ರಾರಂಭವಾಗಬಹುದು ಎಂದಿದ್ದಾರೆ. 2021ರ ಹೊತ್ತಿಗೆ ಏಷ್ಯಾ 7.6 ರಷ್ಟು ಬೆಳವಣಿಗೆ ಸಾಧಿಸಬಹುದು. ಆದರೆ, ಸೋಂಕು ಹರಡುವ ಮೊದಲಿನಷ್ಟು ಬೆಳವಣಿಗೆಯನ್ನು 2021ರ ಅವಧಿಯಲ್ಲಿ ಸಾಧಿಸುವುದು ಕಷ್ಟ ಎಂದಿದ್ದಾರೆ.