ಜಕಾರ್ತಾ: ಫೆಬ್ರವರಿ 1ರ ಮಿಲಿಟರಿ ದಂಗೆಯ ಬಳಿಕ ಮ್ಯಾನ್ಮಾರ್‌ನಲ್ಲಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಆಸಿಯಾನ್) ನಾಯಕರು ಮುಂದಿನ ವಾರ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಸಭೆ ಸೇರುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮ್ಯಾನ್ಮಾರ್‌ನಲ್ಲಿ ನಡೆದ ದಂಗೆ ವಿರೋಧಿ ಪ್ರತಿಭಟನಾಕಾರರ ಮೇಲಿನ ಮಿಲಿಟರಿ ದೌರ್ಜನ್ಯದಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಕಳೆದ ತಿಂಗಳು 10 ಸದಸ್ಯರ ಆಸಿಯಾನ್ ಬಣದ ಶೃಂಗಸಭೆಗೆ ಕರೆ ನೀಡಿದ್ದರು ಎಂದು ಡಿಪಿಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಏಪ್ರಿಲ್ 24ರಂದು ಜಕಾರ್ತದಲ್ಲಿ ಶೃಂಗಸಭೆ ಖುದ್ದಾಗಿ ನಡೆಯಲಿದೆ ಎಂದು ಇಂಡೋನೇಷ್ಯಾ ಅಧ್ಯಕ್ಷರ ಹತ್ತಿರವಾದ ಮೂಲ ತಿಳಿಸಿದೆ. ಎಲ್ಲಾ 10 ದೇಶಗಳನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ.
ಮಾಜಿ ನಾಯಕಿ ಆಂಗ್ ಸಾನ್ ಸೂಕಿ ಅವರ ನಾಗರಿಕ ಸರ್ಕಾರವನ್ನು ಪದಚ್ಯುತಗೊಳಿಸಿ ಸೇನೆ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಸರ್ಕಾರವನ್ನು ವಜಾಗೊಳಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯಿಂದಾಗಿ ಮ್ಯಾನ್ಮಾರ್‌ನ ಭದ್ರತಾ ಪಡೆಗಳಿಂದ 700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಮ್ಯಾನ್ಮಾರ್‌ನ ಮಾನವ ಹಕ್ಕುಗಳ ಗುಂಪಿನ ಅಸಿಸ್ಟೆನ್ಸ್ ಅಸೋಸಿಯೇಷನ್ ಫಾರ್ ಪೊಲಿಟಿಕಲ್ ಪ್ರಿಸೈನರ್ಸ್ (ಎಎಪಿಪಿ) ತಿಳಿಸಿದೆ.