ಯೆರೆವಾನ್(ಅರ್ಮೇನಿಯಾ): ಪ್ರಧಾನಿ ನಿಕೋಲ್ ಪಶಿನ್ಯಾನ್ ಅವರ ಪತ್ನಿ ಅನ್ನಾ ಹಕೋಬ್ಯಾನ್ 13 ಸದಸ್ಯರ ಮಹಿಳಾ ತಂಡವನ್ನು ಸೇರಿಕೊಂಡು ನಾಗೋರ್ನೊ-ಕರಾಬಖ್‌ನ ಗಡಿ ರಕ್ಷಿಸಲು ಯುದ್ಧ ತರಬೇತಿ ಪಡೆಯುತ್ತಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಹಕೋಬ್ಯಾನ್, ಸ್ವತಃ 13 ಮಂದಿ ಮಹಿಳಾ ತಂಡವು ಶೀಘ್ರದಲ್ಲೇ ನಾಗೋರ್ನೊ-ಕರಬಖ್ ಪ್ರದೇಶದಲ್ಲಿ ಅಜರ್ಬೈಜಾನ್ ವಿರುದ್ಧ ಹೋರಾಡುವ ಅರ್ಮೇನಿಯನ್ ಪಡೆಗಳನ್ನು ಸೇರಲಿದೆ ಎಂದು ಘೋಷಿಸಿದ್ದಾರೆ.
"ನಾನು ಸೇರಿದಂತೆ 13 ಮಹಿಳೆಯರ ತಂಡವು ಅಕ್ಟೋಬರ್ 27ರಿಂದ ಮಿಲಿಟರಿ ತರಬೇತಿಯನ್ನು ಪ್ರಾರಂಭಿಸುತ್ತಿದ್ದೇವೆ. ಕೆಲ ದಿನಗಳಲ್ಲೇ ನಮ್ಮ ತಾಯ್ನಾಡಿನ ಗಡಿ ರಕ್ಷಣೆಗೆ ಹೊರಡುತ್ತೇವೆ" ಎಂದು ಹಕೋಬ್ಯಾನ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ "ನಾವು ನಮ್ಮ ಸೈನಿಕರೊಂದಿಗೆ ಮುಂದೆ ಬಂದು ಅರ್ಮೇನಿಯನ್ ಜನರು ತಮ್ಮ ತಾಯ್ನಾಡನ್ನು ರಕ್ಷಿಸಲು ಸಮರ್ಥರಾಗಿದ್ದಾರೆ ಎಂಬುದನ್ನು ಜಗತ್ತಿಗೆ ತೋರಿಸಬೇಕಾದ ಸಮಯ ಬಂದಿದೆ" ಎಂದು ಹೇಳಿದ್ದಾರೆ.
ನಾಗೋರ್ನೊ-ಕರಾಬಖ್ ಪ್ರದೇಶದಲ್ಲಿ ಅರ್ಮೇನಿಯಾ ಮತ್ತು ಅಜರ್ಬೈಜಾನ್ ನಡುವಿನ ಹೋರಾಟವು ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದೆ. ಈ ವರ್ಷದ ಜುಲೈನಲ್ಲಿ ಪ್ರಾರಂಭವಾದ ಗುಂಡಿನ ಕಾಳಗ ಅನುಸರಿಸಿ ಸೆಪ್ಟೆಂಬರ್ 27ರಿಂದ ಘರ್ಷಣೆ ಪ್ರಾರಂಭವಾಗಿದೆ.