ಕಾಬೂಲ್(ಅಫ್ಘಾನಿಸ್ತಾನ): ಕಳೆದ ವಾರ ದೇಶದಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಲಕ್ಷಾಂತರ ಜನರು ದೇಶವನ್ನು ತೊರೆದರು. ಈ ವೇಳೆ, ಕಾಬೂಲ್ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಬಾಂಬ್ ದಾಳಿಗಳು ನಡೆದು ಹಲವಾರು ಜನರು ಪ್ರಾಣ ಕಳೆದುಕೊಂಡರು.
ಇಂತಹ ಕಷ್ಟದ ಸಮಯದಲ್ಲಿ ಸ್ಥಳೀಯರ ನೆರವಿಗೆ ಆಗಮಿಸಿದ ದಕ್ಷಿಣ ಆಫ್ರಿಕಾದ ಪೈಲಟ್, 41 ವರ್ಷದ ಕ್ಯಾಪ್ಟನ್ ನೀಲ್ ಸ್ಟೈಲ್ 600 ಕ್ಕೂ ಹೆಚ್ಚು ಜನರ ಜೀವಗಳನ್ನು ಉಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ವಿದೇಶಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಅವರು, ಆಗಸ್ಟ್ 26 ರಂದು ಕಾಬೂಲ್ನಲ್ಲಿ ಅಮೆರಿಕ ಅಧಿಕಾರಿಗಳಿಂದ ನನಗೆ ಒಂದು ಕರೆ ಬಂತು. ಆ ಸಮಯದಲ್ಲಿ ಆಫ್ಘನ್ನಲ್ಲಾಗಿರುವ ಬಾಂಬ್ ದಾಳಿ ಬಗ್ಗೆ ಮಾಹಿತಿ ನೀಡಿ, ಈಗ ನೀವು ಸಹಾಯ ಮಾಡುವಿರಾ ಎಂದು ಕೇಳಿತು. ಆ ಸಮಯದಲ್ಲಿ ಹಿಂದು -ಮುಂದು ನೋಡದೇ ಒಪ್ಪಿದೆ ಎಂದು ಕ್ಯಾಪ್ಟನ್ ನೀಲ್ ಸ್ಟೈಲ್ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಭದ್ರತಾ ಸ್ಥಿತಿಗತಿ ವಿಚಾರಿಸಿದ ಅಮೆರಿಕ ಸೇನಾ ಮುಖ್ಯಸ್ಥ
ಕರೆ ಮಾಡಿದ ಕೆಲ ಹೊತ್ತಲ್ಲೇ ಕೇವಲ 48 ನಿಮಿಷಗಳಲ್ಲಿ ಬೋಯಿಂಗ್ 727 ವಿಮಾನಕ್ಕೆ 308 ಮಂದಿ ತುಂಬಿಸಿಕೊಂಡು ಸ್ಥಳಾಂತರ ಮಾಡಿದೆವು. ಎರಡನೇ ಬಾರಿ ಸಂಚರಿಸಿದ ವಿಮಾನದಲ್ಲಿ 329 ಜನರನ್ನು ಸ್ಥಳಾಂತರಿಸಲಾಗಿದೆ. ಜನರು ಇಳಿಯಬೇಕಾದರೆ, ಎಲ್ಲಿದ್ದೇವೆಂದು ಅವರಿಗೆ ತಿಳಿದಿರಲಿಲ್ಲ. ಆದರೆ, ಆಫ್ಘನ್ ಹಾಗೂ ತಾಲಿಬಾನ್ನಿಂದ ದೂರ ಇದ್ದೇವೆ ಎಂಬ ಅರಿವು ಮಾತ್ರ ಅವರಿಗಿತ್ತು ಎಂದು ಸ್ಟೈಲ್ ಹೇಳಿಕೊಂಡಿದ್ದಾರೆ.