ಟೋಕಿಯೋ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅಫ್ಘಾನಿಸ್ತಾನದ ಇಬ್ಬರು ಕ್ರೀಡಾಪಟುಗಳು ಟೋಕಿಯೋಗೆ ಆಗಮಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ಶನಿವಾರ ಹೇಳಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗಳಿಂದ ಅರಾಜಕತೆ ಉಂಟಾಗಿದ್ದರ ಬೆನ್ನಲೇ ಅಲ್ಲಿನ ಕ್ರೀಡಾಪಟುಗಳು ಆಗಮಿಸಿರುವುದು ಆಶ್ಚರ್ಯಕರ ಸಂಗತಿ.
ಝಾಕಿಯಾ ಖುದಾದಾದಿ ಮತ್ತು ಹುಸೇನ್ ರಸೌಲಿಯ ಟೋಕಿಯೋಗೆ ಆಗಮಿಸುವ ಮೊದಲು ಕಾಬೂಲ್‌ನಿಂದ ಪ್ಯಾರಿಸ್‌ಗೆ ತೆರಳಿದ್ದರು ಎಂದು ಐಪಿಸಿ ಹೇಳಿದೆ. ಅಥೆನ್ಸ್ 2004ರ ನಂತರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅಫ್ಘಾನಿಸ್ತಾನದ ಮೊದಲ ಮಹಿಳಾ ಕ್ರೀಡಾಪಟು ಖುದಾದಾದಿ. ಈಕೆ ಟೇಕ್ವಾಂಡೊ ಕ್ರೀಡೆಯಲ್ಲಿ ಮಹಿಳೆಯರ 44-49 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. ಇನ್ನೊಂದೆಡೆ ಪುರುಷರ 400 ಮೀಟರ್ಸ್ ಟಿ 47 ಈವೆಂಟ್‌ನ ಹೀಟ್ಸ್‌ನಲ್ಲಿ ಹುಸೇನ್ ರಸೌಲಿಯ ಸ್ಪರ್ಧಿಸಲಿದ್ದಾರೆ.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಸೆಪ್ಟೆಂಬರ್ 5 ರಂದು ಕೊನೆಗೊಳ್ಳಲಿದೆ. ಈ ಇಬ್ಬರನ್ನು ಟೋಕಿಯೋದಲ್ಲಿ ಐಪಿಸಿ ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್ ಭೇಟಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹನ್ನೆರಡು ದಿನಗಳ ಹಿಂದೆ ಅಫ್ಘನ್ ಪ್ಯಾರಾಲಿಂಪಿಕ್ ತಂಡವು ಟೋಕಿಯೋಗೆ ಪ್ರಯಾಣಿಸಲು ಸಾಧ್ಯವಿಲ್ಲ ಎನ್ನಲಾಗಿತ್ತು. ಇದು ಪ್ಯಾರಾಲಿಂಪಿಕ್ನಲ್ಲಿ ಭಾಗವಹಿಸಿದ ಎಲ್ಲರಿಗೂ ಬೇಸರ ತರಿಸಿದ ಸಂಗತಿಯಾಗಿತ್ತು. ಅಷ್ಟೇ ಅಲ್ಲದೆ, ಕ್ರೀಡಾಪಟುಗಳ ಶ್ರಮವನ್ನು ನಾಶಮಾಡಿದಂತಾಗಿತ್ತು ಎಂದಿದ್ದಾರೆ. ಆದರೆ ಆ ಬಳಿಕ ಇಬ್ಬರು ಪ್ಯಾರಾ ಅಥ್ಲೀಟ್‌ಗಳು ಫ್ರಾನ್ಸ್ಗೆ ತೆರಳಿ ಅಲ್ಲಿಂದ ಸುರಕ್ಷಿತವಾಗಿ ಟೋಕಿಯೋಗೆ ಆಗಮಿಸಿರುವುದಕ್ಕೆ ಪಾರ್ಸನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.