ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲು ಪರಸ್ಪರ ಡಿಕ್ಕಿ ಹೊಡೆದುದರ ಪರಿಣಾಮವಾಗಿ 10 ಜನ ಮೃತಪಟ್ಟಿದ್ದು, 40 ಜನ ಗಾಯಗೊಂಡಿದ್ದಾರೆ.
ಬೆಳಗಿನ ಜಾವ 4 ಗಂಟೆಗೆ ವಲ್ಹಾರ್ ಸ್ಟೇಷನ್ನಲ್ಲಿ ಪ್ಯಾಸೆಂಜರ್ ರೈಲು ಸರ್ವಿಸ್ ಲೈನ್ಗೆ ಬಂದುದರ ಪರಿಣಾಮ, ಗೂಡ್ಸ್ ಟ್ರೈನ್ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ರೈಲ್ವೇ ಸಚಿವಾಲಯದ ವಕ್ತಾರ ಅಲಿ ನವಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಧ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ 10 ಜನ ಸಾವನ್ನಪ್ಪಿದ್ದು, 40 ಜನ ಗಾಯಗೊಂಡಿದ್ದಾರೆ. ಈ ಅಂಕಿ ಅಂಶ ಏರಿಕೆಯಾಗುವ ಸಾಧ್ಯತೆಯಿದೆ. ಸಿಗ್ನಲಿಂಗ್ ಸಮಸ್ಯೆ ಹಾಗೂ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಮಲಿಕ್ ಹೇಳಿದ್ದಾರೆ.
ಆಸ್ಪತ್ರೆಗಳು ಈಗಾಗಲೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಕೆಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಸರ್ಕಾರಿ ಅಧಿಕಾರಿ ಜಮೀಲ್ ಅಹ್ಮದ್ ಹೇಳಿದ್ದಾರೆ.
ಪ್ರಧಾನಮಂತ್ರಿ ಇಮ್ರಾನ್ ಖಾನ್ ಶೋಕ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಅವಘಡ ನಡೆಯದಂತೆ ಕ್ರಮ ಕೈಗಳ್ಳಬೇಕೆಂದು ಕರೆ ಕೊಟ್ಟಿದ್ದಾರೆ.
"ಸಾದಿಕಾಬಾದ್ನಲ್ಲಿ ನಡೆದ ಅಪಘಾತ ಬೇಸರ ತರಿಸಿದೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ; ಗಾಯಾಳುಗಳು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುತ್ತೇನೆ. ರೈಲ್ವೇ ಮೂಲಸೌಕರ್ಯದ ನಿರ್ಲಕ್ಷ್ಯದ ಕುರಿತು ಮಂಜಾಗ್ರತೆ ವಹಿಸಿ ಸುರಕ್ಷತೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ರೈಲ್ವೇ ಸಚಿವಾಲಯಕ್ಕೆ ತಿಳಿಸಿದ್ದೇನೆ" ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಸಂತ್ರಸ್ತರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಪ್ರಧಾನ ಮಂತ್ರಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ರೈಲ್ವೆ ಮೂಲಸೌಕರ್ಯದ ನಿರ್ಲಕ್ಷ್ಯದ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ಗೆ ಪ್ರಧಾನಿ ಆದೇಶ ನೀಡಿದ್ದಾರೆ.