ಇಸ್ಲಾಮಾಬಾದ್ (ಪಾಕಿಸ್ತಾನ): ಆಕ್ಷೇಪಾರ್ಹ ವಿಷಯಗಳನ್ನು ಹರಡಿಸುತ್ತಿರುವ ಆರೋಪದ ಹಿನ್ನೆಲೆ ಪಾಕಿಸ್ತಾನದಲ್ಲಿ ಸುಮಾರು 10 ದಿನಗಳ ಹಿಂದೆ ನಿಷೇಧಕ್ಕೆ ಒಳಗಾಗಿದ್ದ ವಿಡಿಯೋ ಶೇರಿಂಗ್ ಮೊಬೈಲ್ ಅಪ್ಲಿಕೇಷನ್ ಟಿಕ್ಟಾಕ್ ಮತ್ತೆ ಪುನಾರಂಭಗೊಂಡಿದೆ.
ನಿಷೇಧವನ್ನು ತೆರವುಗೊಳಿಸುವುದರ ಜೊತೆಗೆ ಕೆಲವೊಂದು ಎಚ್ಚರಿಕೆಗಳನ್ನು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಟಿಕ್ಟಾಕ್ ಸಂಸ್ಥೆಗೆ ನೀಡಿದ್ದು, ಮತ್ತೊಮ್ಮೆ ಅಶ್ಲೀಲ, ಅಸಭ್ಯ ಹಾಗೂ ಸಮಾಜದ ಮೌಲ್ಯಗಳಿಗೆ ವಿರುದ್ಧವಿರುವ ವಿಷಯಗಳು ಕಂಡು ಬಂದರೆ ಶಾಶ್ವತವಾಗಿ ನಿಷೇಧ ಮಾಡುವುದಾಗಿ ಹೇಳಿದೆ.
ಅಕ್ಟೋಬರ್ 9ರಂದು ಟಿಕ್ಟಾಕ್ ಅನ್ನು ಪಾಕಿಸ್ತಾನದಲ್ಲಿ ಬ್ಲಾಕ್ ಮಾಡಲಾಗಿತ್ತು. ಇದಾದ ನಂತರ ಟಿಕ್ಟಾಕ್ ಆಡಳಿತ ಮಂಡಳಿಯೊಂದಿಗೆ ವಿಡಿಯೋ ಸಭೆ ನಡೆಸಲಾಗಿದ್ದು, ಈ ವೇಳೆ ಅಸಭ್ಯ ವಿಚಾರಗಳನ್ನು ಹರಡಿಸುವುದಿಲ್ಲ ಎಂದು ಟಿಕ್ ಟಾಕ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದರಿಂದಾಗಿ ಟಿಕ್ಟಾಕ್ ಬ್ಲಾಕ್ ಮಾಡಿದ್ದನ್ನು ವಾಪಸ್ ಪಡೆಯಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಿವೃತ್ತ ಮೇಜರ್ ಜನರಲ್ ಅಮೀರ್ ಅಜೀಮ್ ಬಜ್ವಾ ಸೆನೆಟ್ನಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ್ದು, ಈವರೆಗೆ ಪಾಕಿಸ್ತಾನದಲ್ಲಿ 25 ಸಾವಿರ ಅಕೌಂಟ್ಗಳು ಹಾಗೂ ನಾಲ್ಕು ಮಿಲಿಯನ್ ವಿಡಿಯೋಗಳನ್ನು ಮೂರು ತಿಂಗಳಲ್ಲಿ ಬ್ಲಾಕ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರ ಜೊತೆಗೆ ಟಿಕ್ಟಾಕ್ ತಕ್ಷಣ ಕ್ರಮ ಕೈಗೊಂಡಿದ್ದು, ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಟಿಕ್ ಟಾಕ್ನ ಕಂಟೆಂಟ್ಗಳ ವಿಚಾರವಾಗಿ ಮಾತನಾಡಿದೆ ಎಂದು ಅಮೀರ್ ಅಜೀಮ್ ಬಜ್ವಾ ಮಾಹಿತಿ ನೀಡಿದ್ದಾರೆ.