ಫಿಲಿಡೆಲ್ಫಿಯಾ: ಕೊರೊನಾ ವ್ಯಾಕ್ಸಿನ್‌ಗಾಗಿ ಇಡೀ ಪ್ರಪಂಚ ಚಾತಕ ಪಕ್ಷಿಯಂತೆ ಕಾಯುತ್ತಿರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡ್‌ನ್ಯೂಸ್ ನೀಡಿದ್ದಾರೆ.
2020ರ ನವೆಂಬರ್‌ಗೂ ಮೊದಲೇ ಕೊರೊನಾ ವ್ಯಾಕ್ಸಿನ್ ಬಿಡುಗಡೆಯಾಗಲಿದೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ. ಮೂರು, ನಾಲ್ಕು ವಾರಗಳಲ್ಲಿ ವ್ಯಾಕ್ಸಿನ್ ಲಭ್ಯವಾಗುವ ಸಾಧ್ಯತೆ ಇದೆ ಎಂದೂ ಭರವಸೆ ನೀಡಿದ್ದಾರೆ.
ವಿಶ್ವಾದ್ಯಂತ ಹಲವು ಕಂಪನಿಗಳು ಅಭಿವೃದ್ಧಿ ಪಡಿಸಿರುವ ವ್ಯಾಕ್ಸಿನ್ ಕೊನೆ ಹಂತದಲ್ಲಿವೆ. ಇದರಲ್ಲಿ ಕೆಲವನ್ನು ಅವಶ್ಯಕತೆ ಇರುವವರಿಗೆ ಬಳಸಲು ರಷ್ಯಾ, ಚೀನಾ ಸರ್ಕಾರಗಳು ಅನುಮತಿ ನೀಡಿವೆ. ಈ ವ್ಯಾಕ್ಸಿನ್‌ಗಳು ಕೆಲವೇ ದಿನಗಳಲ್ಲಿ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿವೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇದರ ನಡುವೆಯೇ ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳಲು ಅತಿ ಸಮೀಪಕ್ಕೆ ಬಂದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬರುವ ಕೆಲವೇ ವಾರಗಳಲ್ಲಿ ಜನ ಬಳಕೆಗೆ ಲಸಿಕೆ ಲಭ್ಯವಾಗಲಿದೆ. ಅದು ಮೂರು, ನಾಲ್ಕು ವಾರಗಳಲ್ಲಿ ಬರಬಹುದು. ಸರ್ಕಾರದಲ್ಲಿ ಬೇರೆಯವರು ಇದ್ದಿದ್ದರೆ ಲಸಿಕೆ ಬರಲು ಮತ್ತಷ್ಟು ವರ್ಷಗಳು ಬೇಕಾಗುವ ಸಾಧ್ಯತೆ ಇತ್ತು. ಆದರೆ ಎಫ್‌ಡಿಎಲ್ ಜೊತೆ ಮತ್ತಷ್ಟು ಅನುಮತಿಯೊಂದಿಗೆ ಅತಿ ವೇಗವಾಗಿ ವ್ಯಾಕ್ಸಿನ್‌ಅನ್ನು ತರುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಅಧ್ಯಕ್ಷ ಚುನಾವಣೆಯ ಪ್ರಚಾರ ನಡೆಸುತ್ತಿರುವ ಟ್ರಂಪ್, ಫಿಲಿಡೆಲ್ಫಿಯಾದಲ್ಲಿ ಮತದಾರರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮತದಾರರು ಕೇಳಿದ ವ್ಯಾಕ್ಸಿನ್ ಕುರಿತ ಪ್ರಶ್ನೆಗೆ ಸಮಾಧಾನವಾಗಿ ಟ್ರಂಪ್ ಈ ಮೇಲಿನಂತೆ ಉತ್ತರ ನೀಡಿದ್ದಾರೆ. ವ್ಯಾಕ್ಸಿನ್ ಬಂದ ನಂತರ ಮಹಾಮಾರಿ ಕೊರೊನಾ ಅದೇ ವೇಗವಾಗಿ ಮಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 3 ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷ ಚುನಾವಣೆಗೂ ಮೊದಲೇ ಲಸಿಕೆ ಬಿಡುಗಡೆಗಾಗಿ ಎಫ್‌ಡಿಎ ಮೇಲೆ ವೈಟ್‌ಹೌಸ್ ಒತ್ತಡ ಹೇರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ವೈಟ್‌ಹೌಸ್ ಈಗಾಗಲೇ ಸ್ಪಷ್ಟನೆಯನ್ನೂ ನೀಡಿದೆ. ವ್ಯಾಕ್ಸಿನ್ ವೈದ್ಯಕೀಯ ಪ್ರಯೋಗ ಸರಿಯಾಗಿ ನಿರ್ವಹಿಸುವವರಿಗೂ ಇದನ್ನು ಬಿಡುಗಡೆ ಮಾಡುವುದಿಲ್ಲ ಎಂದು 9 ಸಂಸ್ಥೆಗಳು ಪ್ರತಿಜ್ಞೆ ಮಾಡಿವೆ. ಇದರ ಬೆನ್ನಲ್ಲೇ ಟ್ರಂಪ್ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ.