ವಾಷಿಂಗ್ಟನ್(ಅಮೆರಿಕ): ಭಯೋತ್ಪಾದನೆಯನ್ನು ನಿಗ್ರಹ ಮಾಡುವ ಕಾರ್ಯಾಚರಣೆಗೆ ಅಮೆರಿಕ ಗಮನ ಹರಿಸಿದ್ದು, ಕಾಬೂಲ್‌ನಲ್ಲಿರುವ ಯುಎಸ್ ಸೇನೆಯ ಮೇಲೆ ಯಾವುದೇ ರೀತಿಯ ದಾಳಿ ಅಥವಾ ನಮ್ಮ ಕಾರ್ಯಾಚರಣೆಗೆ ಅಡ್ಡಿ ಪಡಿಸಿದರೆ ತಾಲಿಬಾನ್ ಸಂಘಟನೆಯೇ ನೇರ ಹೊಣೆಯಾಗಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ವೈಟ್‌ಹೌಸ್‌ನಲ್ಲಿ ಶುಕ್ರವಾರ ಮಾತನಾಡಿರುವ ಬೈಡನ್, ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಮ್ಮ ಸೈನಿಕರು ಜನರನ್ನು ಸ್ಥಳಾಂತರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ತಾಲಿಬಾನ್‌ಗಳು ಇದರ ಜವಾಬ್ದಾರಿ ಹೊರಬೇಕಾಗುತ್ತದೆ. ಆಫ್ಘಾನಿಸ್ತಾನದಲ್ಲಿ ಐಸಿಸ್ ಸೇರಿದಂತೆ ವಿಮಾನ ನಿಲ್ದಾಣದಲ್ಲಿ ಸಂಭಾವ್ಯ ಉಗ್ರರ ಬೆದರಿಕೆ ಬಗ್ಗೆ ಗಮನ ಹರಿಸಿರುವುದಾಗಿ ಬೈಡನ್ ಹೇಳಿದ್ದಾರೆ.
ಇದನ್ನೂ ಓದಿ: ಆಫ್ಘನ್ನಲ್ಲಿ ಹಾವು-ಏಣಿ ಆಟ: ಮೂರು ಜಿಲ್ಲೆಗಳನ್ನು ತಾಲಿಬಾನಿಗಳಿಂದ ವಶಕ್ಕೆ ಪಡೆದ ಆಫ್ಘನ್ ಪಡೆ
ಉಗ್ರರ ಮೂಲೋತ್ಪಾಟನೆಯ ಮಿಷನ್‌ಗಾಗಿ ಮಿತ್ರ ರಾಷ್ಟ್ರಗಳ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲುವ ಹೆಚ್ಚಿನ ಆಸಕ್ತಿ ವಹಿಸಲಾಗಿದೆ. ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಮತ್ತು ಇತರೆ ಅಧಿಕಾರಿಗಳು ನ್ಯಾಟೊ ಸಂಘಟೆಯೊಂದಿಗೆ ಸಭೆ ನಡೆಸಿ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳಿಗೆ ಉಗ್ರರ ಬೆದರಿಕೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಕಳೆದ 20 ವರ್ಷಗಳಿಂದ ವಿಶ್ವದ 29 ರಾಷ್ಟ್ರಗಳು ಒಟ್ಟುಗೂಡಿ ನಿರ್ಮಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆ-ನ್ಯಾಟೊ ಅಫ್ಘಾನ್‌ನಲ್ಲಿ ಕೆಲಸ ಮಾಡಿದೆ. ನಾವು ಮತ್ತೆ ಒಂದಾಗಿ ಜೀವಿಸಬೇಕು. ನಮ್ಮ ಜನರನ್ನು ವಾಪಸ್ ಕರೆತರಲು ಹಾಗೂ ಆಫ್ಘಾನ್ ಸ್ನೇಹಿ ರಾಷ್ಟ್ರಗಳ ಸುರಕ್ಷತೆಗಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಬೈಡನ್ ಕರೆ ನೀಡಿದ್ದಾರೆ.