ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ದಾಳಿ ಸೇರಿದಂತೆ ಯಾವುದೇ ರೀತಿ ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಸಂಸತ್ ಅನುಮೋದನೆ ಪಡೆಯುವ ನಿರ್ಣಯಕ್ಕೆ ಯುಎಸ್ ಕಾಂಗ್ರೆಸ್ ಅಂತಿಮ ಅನುಮೋದನೆ ನೀಡಿದೆ.
ನಿರ್ಣಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮತಕ್ಕೆ ಹಾಕಲಾಯಿತು. ಈ ವೇಳೆ 441 ಸದಸ್ಯ ಬಲದ ಸದನದಲ್ಲಿ ಪರ 227 ಮತಗಳು, ವಿರುದ್ಧವಾಗಿ 186 ಮತಗಳು ಬಿದ್ದಿವೆ. ಈ ಮೂಲಕ ಇನ್ಮುಂದೆ ಟ್ರಂಪ್ ಯಾವುದೇ ಕ್ರಮಕ್ಕೆ ಮುಂದಾಗುವ ಮುನ್ನ ಕಡ್ಡಾಯವಾಗಿ ಸಂಸತ್ತಿನ ಅನುಮತಿ ಪಡೆಯುವುದು ಅವಶ್ಯಕ.
ಇರಾನ್ನ ರೆವಲ್ಯೂಷನರಿ ಗಾರ್ಡ್ಸ್‌ನ ಕುದ್ಸ್ ಪಡೆಯ ಮುಖ್ಯಸ್ಥರಾಗಿದ್ದ ಜನರಲ್ ಖಾಸಿಂ ಸುಲೇಮಾನಿ ಅವರನ್ನು ಅಮೆರಿಕ ಕ್ಷಿಪಣಿ ದಾಳಿ ಮೂಲಕ ಜನವರಿ 3ರಂದು ಹತ್ಯೆ ಮಾಡಿತ್ತು. ಇದಾದ ಬಳಿಕ ಇರಾನ್ ಪ್ರತಿದಾಳಿ ನಡೆಸಿತ್ತು. ಪ್ರತಿದಾಳಿಯಾಗಿ ಇರಾಕ್ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ಗಳ ಮೇಲೆ ಇರಾನ್ ಸೇನೆ ರಾಕೆಟ್ ದಾಳಿ ನಡೆಸಿತ್ತು. ಅಷ್ಟೇ ಅಲ್ಲದೆ, ರಾಜಧಾನಿ ಬಾಗ್ದಾದ್‌ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ ಎರಡು ರಾಕೆಟ್‌ಗಳನ್ನು ಹಾರಿಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗಿತ್ತು.
ಆದರೆ ಅಮೆರಿಕ ಪ್ರತಿದಾಳಿ ನಡೆಸದೇ ಮುಂದೆ ಆಗಬಹುದಾದ ಭೀತಿಯನ್ನ ಕಡಿಮೆ ಮಾಡಿತ್ತು. ಈ ಬೆಳವಣಿಗೆಗಳ ಬೆನ್ನಲೇ ಅಮೆರಿಕ ಸಂಸತ್ತು ಅಮೆರಿಕ ಅಧ್ಯಕ್ಷ ಏಕಪಕ್ಷೀಯ ನಿರ್ಣಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತಲ್ಲದೇ, ಇನ್ಮುಂದೆ ಇರಾನ್ ವಿರುದ್ಧ ಕ್ರಮಕ್ಕೆ ಮುಂದಾಗುವ ಮುನ್ನ ಸಂಸತ್ನ ಅನುಮತಿ ಪಡೆಯುವಂತೆ ಮೂಗುದಾರ ಹಾಕಿತ್ತು.