ನ್ಯೂಯಾರ್ಕ್: ಪ್ರಪಂಚದಲ್ಲಿ 3ನೇ ಹಂತದ ಕೊರೊನಾ ಅಲೆ ಜೋರಾಗಿದೆ. ಮಾರಕ ಸೋಂಕಿನ ಪರಿಣಾಮ ಈಗಾಗಲೇ ಅನೇಕ ರಾಷ್ಟ್ರಗಳು ತತ್ತರಿಸಿ ಹೋಗಿವೆ.
ಪ್ರಮುಖವಾಗಿ ಅಮೆರಿಕದಲ್ಲಿ ಮಹಾಮಾರಿ ಕೋವಿಡ್ ಅಬ್ಬರಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ 13 ಲಕ್ಷಕ್ಕೂ ಅಧಿಕ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ, 1,700 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಜಗತ್ತಿನ ಯಾವುದೇ ದೇಶದಲ್ಲೂ ಕೇವಲ 24 ಗಂಟೆಗಳಲ್ಲಿ ಇಷ್ಟೊಂದು ದೊಡ್ಡಮಟ್ಟದಲ್ಲಿ ಕೊರೊನಾ ಪ್ರಕರಣ ದಾಖಲಾಗಿಲ್ಲ. ಆದರೆ, ಅಮೆರಿಕದಲ್ಲಿ ದಾಖಲೆಯ ಮಟ್ಟದಲ್ಲಿ ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ ಕೆಲ ದಿನಗಳ ಹಿಂದೆ ಒಂದೇ ದಿನ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಕಂಡುಬಂದಿದ್ದವು. ಆದರೆ, ಇದೀಗ 1.35 ಮಿಲಿಯನ್ ಪ್ರಕರಣ ಕಾಣಿಸಿಕೊಂಡಿವೆ. ಅಮೆರಿಕದ ಅನೇಕ ರಾಜ್ಯಗಳು ಶನಿವಾರ ಹಾಗೂ ಭಾನುವಾರದ ಕೋವಿಡ್ ಪ್ರಕರಣದ ಮಾಹಿತಿ ಒಟ್ಟು ಸೇರಿಸಿ ಸೋಮವಾರ ನೀಡಿರುವ ಕಾರಣ ಇಷ್ಟೊಂದು ಪ್ರಕರಣ ದಾಖಲಾಗಿವೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಗಸ್ತು ವೇಳೆ ತನಗೆ ಕಚ್ಚಿದ ನಾಯಿಯನ್ನು ಹೊಡೆದು ಕೊಂದ ಎಎಸ್‌ಐ
ಹೆಚ್ಚಿನ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ ದಾಖಲೆಯ ಮಟ್ಟದಲ್ಲಿ ರೋಗಿಗಳು ಅಸ್ಪತ್ರೆಗೆ ದಾಖಲಾಗುತ್ತಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ 1,36,606 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಕೂಡಾ ದಾಖಲೆಯಾಗಿದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ 132,051 ಸೋಂಕಿತರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.