ಸ್ಯಾನ್ ಫ್ರಾನ್ಸಿಸ್ಕೋ: ತಮ್ಮ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಸೋಲು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೇ, 2021ರ ಜನವರಿ 20ಕ್ಕೂ ಮುನ್ನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರಿಗೆ @ಪೊಟಸ್ (ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ) ಖಾತೆ ಹಸ್ತಾಂತರಿಸುವುದಾಗಿ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಪ್ರಕಟಿಸಿದೆ.
ಪೊಟಸ್ ಅಮೆರಿಕ ಸರ್ಕಾರದ ಖಾತೆಯಾಗಿದ್ದು ಪ್ರಸ್ತುತ 32.8 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಟ್ರಂಪ್ ಆಡಳಿತದ ವೇಳೆ ಈಗ ಪೋಸ್ಟ್ ಮಾಡಲಾದ ಟ್ವೀಟ್‌ಗಳನ್ನು ಆರ್ಕೈವ್ ಮಾಡಲಾಗುವುದು. ಈ ಖಾತೆಯನ್ನು ಶೂನ್ಯ ಟ್ವೀಟ್‌ಗಳಿಗೆ ಮರುಹೊಂದಿಸಲಾಗುತ್ತದೆ.
ಟ್ವಿಟರ್ ವಕ್ತಾರರು ದಿ ಹಿಲ್ ನ್ಯೂಸ್ ವೆಬ್‌ಸೈಟ್‌ಗೆ ನೀಡಿದ ಪ್ರಕಟಣೆಯಲ್ಲಿ, 2021ರ ಜನವರಿ 20ರಂದು ಶ್ವೇತಭವನದ ಸಾಂಸ್ಥಿಕ ಟ್ವಿಟರ್ ಖಾತೆ ಪರಿವರ್ತನೆಗೆ ಬೆಂಬಲಿಸಲು ಸಕ್ರಿಯವಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ. ಇದರಲ್ಲಿ ವೈಟ್‌ಹೌಸ್, ವಿಪಿ, ಫ್ಲೋಟಸ್ ಮತ್ತು ಹಲವು ಇತರ ಅಧಿಕೃತ ಖಾತೆಗಳಿವೆ.
ರಾಷ್ಟ್ರೀಯ ದಾಖಲೆ ಮತ್ತು ದಾಖಲಾತಿಗಳ ಆಡಳಿತದೊಂದಿಗೆ ಸಮಾಲೋಚನೆ ನಡೆಸಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಹೊಸ ಆಡಳಿತವು ತನ್ನ ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳನ್ನು ಹೇಗೆ ಬಳಸಲು ಯೋಜಿಸಿದೆ ಎಂಬುದನ್ನು ಪರಿಶೀಲಿಸಲು ಟ್ವಿಟರ್ ಸಿಬ್ಬಂದಿ ಶೀಘ್ರದಲ್ಲೇ ಬೈಡನ್-ಹ್ಯಾರಿಸ್ ತಂಡದ ಪ್ರತಿನಿಧಿಗಳನ್ನು ಭೇಟಿಯಾಗಲಿದ್ದಾರೆ ಎಂದು ಮೈಕ್ರೋ-ಬ್ಲಾಗಿಂಗ್ ಸೈಟ್ ದೃಢಪಡಿಸಿದೆ.