ಹಾಂಗ್ ಕಾಂಗ್: ಚೀನಾದ ಟಿಕ್‌ಟಾಕ್ ಆ್ಯಪ್ ನಿಷೇಧಿಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ ಟಿಕ್ ಟಾಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಥಾನಕ್ಕೆ ಕೆವಿನ್ ಮೇಯರ್ ರಾಜೀನಾಮೆ ನೀಡಿದ್ದಾರೆ.
ಭದ್ರತಾ ಅಪಾಯದ ದೃಷ್ಟಿಯಿಂದ 45 ದಿನಗಳಲ್ಲಿ ಟಿಕ್‌ಟಾಕ್ ಮಾರುವಂತೆ ವಾರ್ನಿಂಗ್ ಕೊಟ್ಟಿತ್ತು. ಅಷ್ಟೇ ಅಲ್ಲದೆ, ಬೈಟ್‌ಡ್ಯಾನ್ಸ್ ಕಂಪನಿಗೆ ಈ ಕುರಿತಂತೆ 90 ದಿನಗಳವರೆಗೆ ಗಡುವು ನೀಡಿದ್ದು, ಆ್ಯಪ್ನ್ನು ಮಾರಬೇಕು, ಇಲ್ಲವೇ ನಿಷೇಧಿಸಬೇಕು ಎಂದು ಸೂಚನೆ ನೀಡಿದ್ದರು.
ಈಗಾಗಲೇ ಟ್ರಂಪ್ ವಿರುದ್ಧ ನ್ಯಾಯಾಂಗ ಹೋರಾಟ ಮಾಡುವುದಾಗಿ ಬೈಟ್ ಡ್ಯಾನ್ಸ್ ಕಂಪನಿ ಹೇಳಿತ್ತು. ಆದರೆ ಚೀನಾ ಮತ್ತು ಅಮೆರಿಕ ನಡುವಿನ ಅಂತಾರಾಷ್ಟ್ರೀಯ ಸಂಬಂಧ ಮತ್ತಷ್ಟು ಹದಗೆಟ್ಟಿರುವ ಹಿನ್ನೆಲೆ ಕೆವಿನ್ ಮೇಯರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
"ಸಾಂಸ್ಥಿಕ ರಚನಾತ್ಮಕ ಬದಲಾವಣೆಗಳಿಗೆ ಅಗತ್ಯವಿರುವ ಕೆಲಸವನ್ನು ಮಾಡಿದ್ದೇನೆ. ಆ್ಯಪ್ನ ಕುರಿತು ಜಾಗತಿಕ ಮಟ್ಟದಲ್ಲಿ ತಿಳಿಸಿದ್ದೇನೆ. ಸದ್ಯ ಆ್ಯಪ್ನ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗುವ ನಿರೀಕ್ಷೆಯಿದೆ. ನಾನು ಭಾರವಾದ ಹೃದಯದಿಂದ ಕಂಪನಿಯನ್ನು ತೊರೆಯಲು ನಿರ್ಧರಿಸಿದ್ದೇನೆ ಎಂದು ನಿಮ್ಮೆಲ್ಲರಿಗೂ ತಿಳಿಸಬಯಸುತ್ತೇನೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಮಾಜಿ ಡಿಸ್ನಿ ಕಾರ್ಯನಿರ್ವಹಣಾಧಿಕಾರಿ ಕೆವಿನ್ ಮೇಯರ್ ಮೇ ತಿಂಗಳಲ್ಲಿ ಟಿಕ್‌ಟಾಕ್ ಸಿಇಒ ಆಗಿ ಸೇರಿಕೊಂಡಿದ್ದರು.