ಶಿಕಾಗೋ (ಅಮೆರಿಕ): ಸ್ಟೋರ್ ಸೆಕ್ಯುರಿಟಿ ಗಾರ್ಡ್ಗೆ ಅಕ್ಕ-ತಂಗಿಯರಿಬ್ಬರು ಸೇರಿ 27 ಬಾರಿ ಚಾಕುವಿನಿಂದ ಇರಿದಿರುವ ಘಟನೆ ವೆಸ್ಟ್ ಸೈಡ್ ಶಿಕಾಗೋದಲ್ಲಿ ನಡೆದಿದೆ.
ಕಳೆದ ಭಾನುವಾರದಂದು ಸ್ಟೋರ್ ಭೇಟಿ ನೀಡಿದ್ದ ಇಬ್ಬರು ಸಹೋದರಿಯರಿಗೆ ಸೆಕ್ಯುರಿಟಿ ಗಾರ್ಡ್ ಫೇಸ್ ಮಾಸ್ಕ್ ಧರಿಸಲು ಮತ್ತು ಹ್ಯಾಂಡ್ ಸ್ಯಾನಿಟೈಜರ್ ಬಳಸುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಸೆಕ್ಯುರಿಟಿ ಗಾರ್ಡ್ ಮತ್ತು ಸಹೋದರಿಯರಿಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಕ್ಯಾರಿ ಜೇಮ್ಸ್ ತಿಳಿಸಿದ್ದಾರೆ.
ವಾಗ್ವಾದ ವಿಕೋಪಕ್ಕೆ ತಿರುಗಿದ್ದು, 21 ವರ್ಷದ ಜೆಸ್ಸಿಕಾ ಹಿಲ್ ಮತ್ತು 18 ವರ್ಷದ ಜಯಲಾ ಹಿಲ್ ಎಂಬುವರು 32 ವರ್ಷದ ಸೆಕ್ಯುರಿಟಿಯ ಎದೆ, ಬೆನ್ನು ಮತ್ತು ಕೈ ಮೇಲೆ 27 ಬಾರಿ ಚಾಕುವಿನಿಂದ ಇರಿದಿದ್ದಾರೆ. ಸೆಕ್ಯುರಿಟಿ ಗಾರ್ಡ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದಾಳಿ ನಡೆದ ಸ್ಥಳದಲ್ಲಿ ಮಹಿಳೆಯರನ್ನು ಬಂಧಿಸಲಾಗಿದ್ದು, ಇಬ್ಬರಿಗೂ ಹತ್ತಿರದ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ. ಆರೋಪಿಗಳನ್ನು ಮಹಿಳಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸಹೋದರಿಯರಿಬ್ಬರು ಬೈಪೋಲಾರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಜೇಮ್ಸ್ ಹೇಳಿದ್ದಾರೆ.