ವಿಶ್ವಸಂಸ್ಥೆ, ನ್ಯೂಯಾರ್ಕ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ 23ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ನಲ್ಲಿ ಸಾವು ನೋವು ಹೆಚ್ಚುತ್ತಲಿದೆ. ಉಕ್ರೇನಿಯನ್ನರು ಸ್ಥಳಾಂತರಗೊಳ್ಳುತ್ತಿದ್ದಾರೆ. ರಷ್ಯಾ ನಡೆಗೆ ಪ್ರಪಂಚದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೂ ರಷ್ಯಾ ತನ್ನ ಕ್ರೌರ್ಯ ಮುಂದುವರಿಸಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ಸಭೆಗಳು ನಡೆಯುತ್ತಿದ್ದು, ರಷ್ಯಾ ವಿರುದ್ಧ ಮತ ಚಲಾವಣೆಯಾಗುತ್ತಿದೆ. ಇನ್ನೂ ಉಕ್ರೇನ್‌ನಲ್ಲಿನ ಮಾನವೀಯ ಪರಿಸ್ಥಿತಿಯ ನಿರ್ಣಯಕ್ಕೆ ಸಂಬಂಧಿಸಿದಂತೆ ಇಂದಿನ ಸಭೆಯಲ್ಲಿ ಮತವನ್ನು ಕೇಳುತ್ತಿಲ್ಲ ಎಂದು ರಷ್ಯಾದ ಯುಎನ್ ರಾಯಭಾರಿ ವಾಸಿಲಿ ನೆಬೆಂಜಿಯಾ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ: 21 ಸಾವು, 25ಕ್ಕೂ ಅಧಿಕ ಮಂದಿ ಗಾಯ
ವಿಶ್ವಸಂಸ್ಥೆಯ ಸದಸ್ಯರ ಮೇಲೆ ಅಮೆರಿಕ ಮತ್ತು ಅಲ್ಬೇನಿಯಾದ ಒತ್ತಡದಿಂದಾಗಿ ಮತವನ್ನು ಕೇಳದಿರಲು ರಷ್ಯಾ ಈ ಹಂತದಲ್ಲಿ ನಿರ್ಧರಿಸಿದೆ ಎಂದು ವಾಸಿಲಿ ನೆಬೆಂಜಿಯಾ ಗುರುವಾರದಂದು ಯುಎನ್ ಭದ್ರತಾ ಮಂಡಳಿಗೆ ತಿಳಿಸಿದರು, ಆದರೆ, ಮಾಸ್ಕೋ ನಿರ್ಣಯವನ್ನು ಹಿಂತೆಗೆದುಕೊಳ್ಳುತ್ತಿಲ್ಲ ಎಂದು ಅವರು ಒತ್ತಿ ಹೇಳಿದರು. ಹೊಸ ದಾಖಲೆಗಳನ್ನು ಇಟ್ಟುಕೊಂಡು ಉಕ್ರೇನ್‌ನಲ್ಲಿರುವ ಅಮೆರಿಕ ಜೈವಿಕ ಪ್ರಯೋಗಾಲಯಗಳ ಕುರಿತ ಕೆಲ ಆರೋಪಗಳ ಕುರಿತು ಮತ್ತೊಮ್ಮೆ ಚರ್ಚಿಸಲು ರಷ್ಯಾ ಇಂದಿನ ಕೌನ್ಸಿಲ್ ಸಭೆಯೊಂದಿಗೆ ಮುಂದುವರಿಯಲು ಯೋಜಿಸಿದೆ ಎಂದು ನೆಬೆಂಜಿಯಾ ಹೇಳಿದರು.