ಕ್ಯಾಲಿಫೋರ್ನಿಯಾ (ಅಮೆರಿಕ): ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದಿದ್ದ ಅಮೆರಿಕದಲ್ಲೀಗ ಮಾಸ್ಕ್ ಹಾಕಿದವರಿಗೆ ದಂಡ ವಿಧಿಸುತ್ತಿದ್ದಾರೆಂದರೆ ನೀವು ನಂಬಲೇ ಬೇಕು.
ಅಮೆರಿಕದ ಕ್ಯಾಲಿಫೋರ್ನಿಯಾದ ರೆಸ್ಟೋರೆಂಟ್ವೊಂದರಲ್ಲಿ ಮಾಸ್ಕ್ ಧರಿಸಿ ಬಂದ ಗ್ರಾಹಕರಿಗೆ ದಂಡ ವಿಧಿಸಲಾಗುತ್ತಿದೆ. ಮೆಂಡೊಸಿನೊದಲ್ಲಿನ ಫಿಡೆಲ್‌ಹೆಡ್ಸ್ ಕೆಫೆ ಮಾಲೀಕರು ಕೊರೊನಾ ಸಾಂಕ್ರಾಮಿಕದ ಆರಂಭದಿಂದಲೂ ಲಾಕ್ಡೌನ್-ಕೋವಿಡ್ ನಿರ್ಬಂಧಗಳನ್ನು ವಿರೋಧಿಸುತ್ತಾ ಬಂದಿದ್ದರು. ಮಾಸ್ಕ್ಗಳನ್ನು ಕಸದ ಬುಟ್ಟಿಗೆ ಎಸೆಯುವವರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಕೂಡ ಮಾರ್ಚ್‌ನಲ್ಲಿ ಘೋಷಿಸಿದ್ದರು.
ಇದನ್ನೂ ಓದಿ: ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್ ಧರಿಸಬೇಕಿಲ್ಲ- ಅಮೆರಿಕ
ಇದೀಗ ಮಾಸ್ಕ್ ಹಾಕಿ ರೆಸ್ಟೋರೆಂಟ್ಗೆ ಬಂದ ಜನರಿಗೆ ಹೆಚ್ಚುವರಿ 5 ಡಾಲರ್ ಹಣವನ್ನು ನೀಡಲು ಸೂಚಿಸುತ್ತಿದ್ದಾರೆ. ಆದರೆ ದಂಡದ ಹಣವನ್ನು ಸಂಗ್ರಹಿಸಿ ಅದನ್ನು ಚಾರಿಟಿಗಳಿಗೆ ದಾನವಾಗಿ ನೀಡುವುದಾಗಿ ರೆಸ್ಟೋರೆಂಟ್ ಮಾಲೀಕ ಕ್ರಿಸ್ ಕ್ಯಾಸಲ್‌ಮನ್ ಹೇಳಿದ್ದಾರೆ.
ಕೋವಿಡ್ ಪರಿಣಾಮಗಳನ್ನು ಎದುರಿಸಿ ಸಹಜ ಸ್ಥಿತಿಗೆ ಮರಳಿರುವ ಅಮೆರಿಕದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೊರತು ಪಡಿಸಿ ಉಳಿದ ಸ್ಥಳಗಳಲ್ಲಿ ಸಂಪೂರ್ಣವಾಗಿ ವ್ಯಾಕ್ಸಿನ್ ಹಾಕಿಸಿಕೊಂಡ ಜನರು ಮಾಸ್ಕ್ ಧರಿಸಬೇಕಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ದೇಶದೊಳಗೆ ಪ್ರಯಾಣಿಸುವವರು ಕ್ವಾರಂಟೈನ್ಗೆ ಒಳಪಡುವ ಅಗತ್ಯತೆಯಿಲ್ಲ ಎಂದು ಅಧ್ಯಕ್ಷ ಜೋ ಬೈಡನ್ ಈ ಹಿಂದೆ ತಿಳಿಸಿದ್ದರು.