ಸ್ಯಾನ್ ಡಿಯಾಗೋ( ಅಮೆರಿಕ) : ವಿಶ್ವದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ ಸೀ ಡ್ರ್ಯಾಗನ್ ಪ್ರಭೇದವನ್ನು ಹೆಚ್ಚಿಸುವ ಮತ್ತು ಪರಿಚಯಿಸುವ ನಿಟ್ಟಿನಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೀ ಡ್ರ್ಯಾಗನ್ ಅಕ್ವೇರಿಯಂ ಆರಂಭಿಸಿದ್ದು, ಎಲ್ಲರಿಗೂ ತಿಳಿದ ವಿಚಾರ. ಈಗ ಈ ಅಕ್ವೇರಿಯಂನಲ್ಲಿ ಸೀ ಡ್ರ್ಯಾಗನ್ ಸಂಖ್ಯೆ ಹೆಚ್ಚಾಗ್ತಿದೆ.
ಹೌದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಮುದ್ರ ಶಾಸ್ತ್ರ ವಿಭಾಗ ಈ ಅಕ್ವೇರಿಯಂ ಆರಂಭಿಸಿದ್ದು, ಇದರಲ್ಲಿ ವೀಡಿ ಹಾಗೂ ಲೀಫಿ ಎನ್ನುವ ಪ್ರಭೇದದ ಸೀ ಡ್ರ್ಯಾಗನ್ಗಳನ್ನು ಇಡಲಾಗಿತ್ತು. ಈ ವಾರ ಲೀಫಿ ತಳಿಯ ಸೀ ಡ್ರ್ಯಾಗನ್ ಎರಡು ಮರಿಗಳಿಗೆ ಜನ್ಮ ನೀಡಿದೆ. ಅವು ಒಂದು ಇಂಚು ಎತ್ತರ ಬೆಳೆದಿದ್ದು, ಈ ಮೀನು ಆಹಾರ ಸೇವನೆ ಆರಂಭಿಸಿದೆ. ಯಶಸ್ವಿಯಾಗಿ ಈ ತಳಿಯ ಪ್ರಬೇಧಗಳನ್ನು ನಾವು ಬೆಳೆಸುತ್ತಿದ್ದೇವೆ ಎಂದು ಅಕ್ವೇರಿಯಂ ಮೇಲ್ವಿಚಾರಕರು ಹೇಳಿದ್ದಾರೆ.
ಆಸ್ಟ್ರೇಲಿಯಾದ ಕೆಲ ಭಾಗದಲ್ಲಿ ಮಾತ್ರ ಸಿಗುವ ಈ ಡ್ರ್ಯಾಗನ್ ನಶಿಸಿ ಹೋಗುವ ಹಂತಕ್ಕೆ ತಲುಪಿದೆ. ಹೀಗಾಗಿ ಜನರಿಗೆ ಈ ಪ್ರಬೇಧವನ್ನ ಪರಿಚಯಿಸಲು ಮತ್ತು ಹೆಚ್ಚಿಸುವ ನಿಮಿತ್ತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಈ ತೀರ್ಮಾನ ತೆಗೆದುಕೊಂಡಿತ್ತು.
ಈ ಸೀ ಡ್ರ್ಯಾಗನ್ ಸಂರಕ್ಷಣೆಗೆ 18 ಅಡಿ ಎತ್ತರದ ಅಕ್ವೇರಿಯಂ ಸಿದ್ಧಪಡಿಸಿದ್ದು, ಇದರಲ್ಲಿ ಮೂರು ಲೀಫಿ ಡ್ರ್ಯಾಗನ್‌ಗಳಿದ್ದು, ಎರಡು ಗಂಡು ಹಾಗೂ ಮತ್ತೊಂದು ಹೆಣ್ಣು ಡ್ರ್ಯಾಗನ್ ಇದೆ . ಇನ್ನುಳಿದಂತೆ 11 ವೀಡಿ ಡ್ರ್ಯಾಗನ್ ಗಳಿವೆ. ಈಗ ಲೀಫಿ ಡ್ರ್ಯಾಗನ್ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಸಂತಸವನ್ನ ಮತ್ತಷ್ಟು ಹೆಚ್ಚಿಸಿದೆ.