ವಾಷಿಂಗ್ಟನ್(ಅಮೆರಿಕ): ಪಾಕಿಸ್ತಾನ ಬೆಂಬಲಿತ ಪ್ರತ್ಯೇಕತಾವಾದಿ ಖಲಿಸ್ತಾನಿ ಗುಂಪುಗಳು ಅಮೆರಿಕದಲ್ಲಿ ತಮ್ಮ ಸ್ಥಾನವನ್ನು ಸದ್ದಿಲ್ಲದೇ ಪ್ರಬಲಗೊಳಿಸಿಕೊಳ್ಳುತ್ತಿವೆ ಎಂದು ಅಮೆರಿಕದ ಹಡ್ಸನ್ ಇನ್ಸ್ಟಿಟ್ಯೂಟ್ ಎಚ್ಚರಿಕೆ ನೀಡಿದೆ. ಜೊತೆಗೆ ಈ ಕುರಿತು ಭಾರತ ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಅಮೆರಿಕ ಉದಾಸೀನ ತೋರುತ್ತಿದೆ ಎಂದು ಆರೋಪಿಸಿದೆ.
ಅಮೆರಿದ ಚಿಂತಕರ ಒಕ್ಕೂಟವಾದ ಹಡ್ಸನ್ ಇನ್ಸ್ಟಿಟ್ಯೂಟ್ 'Pakistan's Destabilization Playbook: Khalistani Activism in the US' ಎಂಬ ವರದಿಯನ್ನು ಪ್ರಕಟಿಸಿ ಅಮೆರಿಕದಲ್ಲಿನ ಖಲಿಸ್ತಾನಿ ಮತ್ತು ಕಾಶ್ಮೀರಿ ಪ್ರತ್ಯೇಕವಾಗಿ ಗುಂಪುಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ.
ಈ ಗುಂಪುಗಳು ಉಗ್ರಗಾಮಿಗಳೊಂದಿಗೆ ಸಂಬಂಧವನ್ನು ಹೊಂದಿದ್ದು, ಈ ಸಂಬಂಧ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಮೆರಿಕ ಅಳವಡಿಸಿಕೊಂಡಿರುವ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಜೊತೆಗೆ ಪಾಕಿಸ್ತಾನ ಮೂಲದ ಇಸ್ಲಾಂ ಭಯೋತ್ಪಾದಕ ಗುಂಪುಗಳಂತೆ, ಖಲಿಸ್ತಾನಿ ಗುಂಪುಗಳೂ ಹೊಸ ಹೆಸರುಗಳಲ್ಲಿ ಅಸ್ಥಿತ್ವಕ್ಕೆ ಬರಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.
ವಿಪರ್ಯಾಸ ಎಂದರೆ ಖಲಿಸ್ತಾನ್ ಚಳವಳಿಯ ಬೆಂಬಲಿಗರು ಅಮೆರಿಕ ಮಾತ್ರವಲ್ಲದೇ ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್), ಕೆನಡಾ ಮುಂತಾದ ರಾಷ್ಟ್ರಗಳಲ್ಲೂ ಇದ್ದಾರೆ. ಆದರೆ, ಅವರು ಮಾಡುತ್ತಿರುವ ಅಪರಾಧ ಕೃತ್ಯಗಳನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗಿದೆ.
ಖಲಿಸ್ತಾನ್-ಸಂಬಂಧಿತ ಉಗ್ರಗಾಮಿ ಚಟುವಟಿಕೆಗಳ ಮೇಲ್ವಿಚಾರಣೆಗೆ ಅಮೆರಿಕ ಸರ್ಕಾರ ಆದ್ಯತೆ ನೀಡಬೇಕೆಂದು, ಇಲ್ಲವಾದಲ್ಲೂ ಭಾರತದ ಪಂಜಾಬ್ನಲ್ಲಿ ಖಲಿಸ್ತಾನಿ ಭಯೋತ್ಪಾದಕರು ನಡೆಸುತ್ತಿರುವ ಹಿಂಸಾಚಾರ ಅಥವಾ ಹಿಂಸಾಚಾರಕ್ಕೆ ಪೂರ್ವ ಸಿದ್ಧತೆ ಅರ್ಥವಾಗುವುದಿಲ್ಲ ಎಂದು ಹಡ್ಸನ್ ಇನ್ಸ್ಟಿಟ್ಯೂಟ್ ಹೇಳಿದೆ.
ಚೀನಾ ವಿಚಾರದಲ್ಲಿ ಅಮೆರಿಕ ಮತ್ತು ಭಾರತ ಒಟ್ಟಾಗಿರುವ ಕಾರಣ, ಖಲಿಸ್ತಾನಿಗಳು ಅಮೆರಿಕದಲ್ಲಿ ಹೆಚ್ಚಿನ ಪರಿಣಾಮ ಬೀರಲಿದ್ದಾರೆ ಎಂದು ಅದು ಹೇಳಿದೆ. ಜೊತೆಗೆ ಭಾರತದ ಕಾಳಜಿಯನ್ನು ಅಮೆರಿಕ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಮತ್ತು ಅತ್ಯಗತ್ಯವಾದ ಕಾನೂನುಗಳನ್ನು ರೂಪಿಸಬೇಕೆಂದು ಹಡ್ಸನ್ ಇನ್ಸ್ಟಿಟ್ಯೂಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ವಿಮಾನ ಅಪಘಾತ: 7 ಮಂದಿ ಸಾವು