ನವದೆಹಲಿ: ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಗೆ ಡೊಮಿನಿಕಾ ಹೈಕೋರ್ಟ್ ವೈದ್ಯಕೀಯ ನೆಲೆಯಲ್ಲಿ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆ ಚಿಕಿತ್ಸೆಗಾಗಿ ಚೋಕ್ಸಿ, ಆಂಟಿಗುವಾ ತಲುಪಿದ್ದಾನೆ. ನ್ಯಾಯಾಲಯಕ್ಕೆ 10 ಸಾವಿರ ಡಾಲರ್ ಪಾವತಿಸಿದ ಬಳಿಕ ಅಲ್ಲಿನ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
62 ವರ್ಷದ ಚೋಕ್ಸಿಗೆ ನರ ಸಂಬಂಧಿತ ಕಾಯಿಲೆಯಿದ್ದು, ಈ ಸಂಬಂಧ ನ್ಯಾಯಾಲಯಕ್ಕೆ ಎಲ್ಲ ದಾಖಲೆಗಳನ್ನು ನೀಡಿದ್ದ. ಪರಿಶೀಲಿಸಿದ ನ್ಯಾಯಾಲಯ, ಚಿಕಿತ್ಸೆ ಪಡೆಯಲು ಅವಕಾಶ ನೀಡಿದೆ. 2018ರಿಂದಲೂ ಆಂಟಿಗುವಾದಲ್ಲಿ ನೆಲೆಸಿರುವ ಮೆಹುಲ್ ಚೋಕ್ಸಿ, ಅಲ್ಲಿನ ಪೌರತ್ವವನ್ನು ಕೂಡ ಪಡೆದುಕೊಂಡಿದ್ದಾನೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂ ವಂಚನೆ ಮಾಡಿದ ಪ್ರಕರಣದಲ್ಲಿ ಚೋಕ್ಸಿ, ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಚೋಕ್ಸಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಆತನಿಗೆ ಜಾಮೀನು ಮಂಜೂರು ಮಾಡಬೇಕು ಎಂದು ವಕೀಲರು ಮನವಿ ಮಾಡಿದ್ದರು. ಆಂಟಿಗುವಾಕ್ಕೆ ಮರಳಿ ಅಲ್ಲಿ ಪರಿಣಿತ ನರವೈದ್ಯರಿಂದ ವೈದ್ಯಕೀಯ ನೆರವು ಪಡೆದುಕೊಳ್ಳಲು ಡೊಮಿನಿಕಾ ಹೈಕೋರ್ಟ್ ಸಮ್ಮತಿ ನೀಡಿದೆ ಎಂದು ವಕೀಲರು ತಿಳಿಸಿದ್ದಾರೆ.
ಇದನ್ನೂ ಓದಿ:ಸಿನಿಮಾದಲ್ಲಿ 'ಸೋನು ಸೂದ್'ಗೆ ಹೊಡೆದಿದ್ದಕ್ಕೆ ಸಿಟ್ಟು... ಮನೆಯ ಟಿವಿ ಒಡೆದು ಹಾಕಿದ ವಿರಾಟ್!