ವಾಷಿಂಗ್ಟನ್: ಅಮೆರಿಕ ಚುನಾಯಿತ ಅಧ್ಯಕ್ಷರಾದ ಜೋ ಬೈಡನ್ ಪತ್ನಿ ಇದೀಗ ಯುಎಸ್ನ ಪ್ರಥಮ ಮಹಿಳೆಯ ಸ್ಥಾನ ಅಲಂಕರಿಸಲಿದ್ದಾರೆ. ಜೋ ಬೈಡನ್ ಅವರ ದಾಂಪತ್ಯ ಜೀವನದ ಉದ್ದಕ್ಕೂ ಅವರೊಂದಿಗಿದ್ದು, ರಾಜಕೀಯವಾಗಿಯೂ ಹೆಜ್ಜೆ ಹಾಕಿದ್ದ ಜಿಲ್ ಬೈಡನ್ ಪ್ರಥಮ ಮಹಿಳೆ ಎನಿಸಿಕೊಳ್ಳಲಿದ್ದಾರೆ.
43 ವರ್ಷದ ದಾಂಪತ್ಯ ಜೀವನದಲ್ಲಿ ಜೋ ಬೈಡನ್ ಜೊತೆ ಶ್ವೇತ ಭವನದಿಂದ ಹಿಡಿದು ಸಾಮಾಜಿಕ ಜೀವನದುದ್ದಕ್ಕೂ ಕೈ ಹಿಡಿದಿದ್ದರು. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡನ್ ಜೊತೆ ಅವರ ರಕ್ಷಣೆಯ ಹೊಣೆಯಾಗಿ ಜಿಲ್ ಬೈಡನ್ ಗುರುತಿಸಿಕೊಂಡಿದ್ದರು.
ಜಿಲ್ ಬೈಡನ್ ಡಾಕ್ಟರೇಟ್ ಪದವಿ ಪಡೆದ ಶಿಕ್ಷಕಿಯಾಗಿದ್ದು, ಇದೀಗ ಶ್ವೇತ ಭವನ ತಲುಪಲಿದ್ದಾರೆ. ಅಮೆರಿಕ ಮಹಿಳಾ ಸಮುದಾಯವನ್ನು ಪ್ರತಿನಿಧಿಲಿರುವ ಅವರು ತಮ್ಮದೇ ಗುರುತು ಸಂಪಾದಿಸಲಿದ್ದಾರೆ. 46ನೇ ಅಧ್ಯಕ್ಷ ಬೈಡನ್ ಅಧಿಕೃತ ಅಧ್ಯಕ್ಷ ಹುದ್ದೆಗೇರುವ ದಿನ ಪ್ರಥಮ ಮಹಿಳೆಯ ಗೌರವ ಮುಡಿಗೇರಲಿದೆ.
ಅವರು ಪ್ರಥಮ ಮಹಿಳೆಯಾಗಿ ಗೌರವ ಸ್ವೀಕರಿಸಿದ ಬಳಿಕವೂ ಕಾಲೇಜು ಪ್ರಾಧ್ಯಾಪಕಿಯಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ಈ ಮೂಲಕ ಪ್ರಥಮ ಮಹಿಳೆಯಾಗಿ ಉದ್ಯೋಗ ನಿರ್ವಹಿಸಲಿರುವ ಮೊದಲ ಅಧ್ಯಕ್ಷರ ಪತ್ನಿ ಎನಿಸಿಕೊಳ್ಳಲಿದ್ದಾರೆ.
ಇನ್ನು ಜೋ ಬೈಡನ್ ವಿವಾಹವಾದಾಗಿನಿಂದಲೂ ಜಿಲ್ ಬೈಡನ್ ಅವರ ಬೆನ್ನಿಗೆ ನಿಂತಿದ್ದು, ರಾಜಕೀಯ ಆಗುಹೋಗುಗಳ ಸಂಪೂರ್ಣ ಅರಿವಿದೆ. ಹೀಗಾಗಿ ಅವರಿಗೆ ಈ ಜವಾಬ್ದಾರಿಯು ಹೊಸ ಆಯಾಮವೇನಲ್ಲ ಎನ್ನಲಾಗುತ್ತಿದೆ.
ಪ್ರಥಮ ಮಹಿಳೆ ಗೌರವ ಪಡೆದ ಅವರ ಮುಂದೆ ಪ್ರಥಮವಾಗಿ ಕೊರೊನಾ ವೈರಸ್ ದೇಶದಿಂದ ಹೊರಹಾಕುವ ಸವಾಲು ಎದುರಾಗಲಿದೆ. ಇದಲ್ಲದೇ ರಾಷ್ಟ್ರದುದ್ದಕ್ಕೂ ತಲೆದೂರಿರುವ ಆಂತರಿಕ ಸಮಸ್ಯೆಗಳು ಹಾಗೂ ಗಡಿ ಸಮಸ್ಯೆಗಳ ಕುರಿತಂತೆ ಇವರ ನಿರ್ಧಾರಗಳ ಮೇಲೆ ಜನತೆಯ ದೃಷ್ಟಿನೆಟ್ಟಿದೆ.