ವಾಷಿಂಗ್ಟನ್: ಅಮೆರಿಕದ ಕ್ಯಾಪಿಟಲ್ ಹಿಲ್ನಲ್ಲಿ ನಡೆದ ಹಿಂಸಾಚಾರ ಸಂಬಂಧ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಪಟ್ಟಿ ಸಿದ್ಧವಾಗಿದ್ದು, ಇದನ್ನು ಪರಿಗಣಿಸಲು ಕಾಂಗ್ರೆಸ್ನಲ್ಲಿ (ಸಂಸತ್ತು) ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಬುಧವಾರ ವೋಟ್ ಮಾಡಲಿದೆ.
ಈ ಮೂಲಕ ಸಂವಿಧಾನದ 25ನೇ ತಿದ್ದುಪಡಿ ಅಡಿ ಟ್ರಂಪ್ ಅವರನ್ನು ಅಧಿಕಾರದಿಂದ ತೆಗೆದುಹಾಕುವ ನಿರ್ಣಯ ಅಂಗೀಕರಿಸಲು ಉಪಾಧ್ಯಕ್ಷ ಮೈಕ್ ಪೆನ್ಸ್ ಬಳಿ ಸದನವು ಮನವಿ ಮಾಡಲಿದೆ. ಒಂದೊಮ್ಮೆ ಇದಕ್ಕೆ ಮೈಕ್ ಪೆನ್ಸ್ ನಿರಾಕರಿಸಿದರೆ ನಾವು ದೋಷಾರೋಪಣೆ ಶಾಸನದ ಮೂಲಕ ಮುಂದುವರೆಯುತ್ತೇವೆ ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.
ಇದನ್ನೂ ಓದಿ: ತುರ್ತು ಪರಿಸ್ಥಿತಿ ಘೋಷಿಸಿದ ಡೊನಾಲ್ಡ್ ಟ್ರಂಪ್!
ಜನವರಿ 6 ರಂದು ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಮಹಿಳೆ, ಪೊಲೀಸ್ ಸಿಬ್ಬಂದಿ ಸೇರಿ ಐವರು ಮೃತಪಟ್ಟಿದ್ದರು. ದಾಳಿ ನಡೆಸಲು ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಸಿದ್ಧವಾಗಿದೆ.
ಇತ್ತ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ಡಿಸಿಯಲ್ಲಿ ತಮ್ಮ ಅಧಿಕಾರಾವಧಿಯ ಕೊನೆಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.