ವಾಷಿಂಗ್ಟನ್(ಅಮೆರಿಕ): ವಿದೇಶಿ ಪ್ರಜೆಗಳಿಗೆ ಹಾಗೂ ದೇಶದಲ್ಲಿ ವಾಸವಿಲ್ಲದ ಭಾರತ ಮೂಲದ ಜನರಿಗೆ ಸಾಗರೋತ್ತರ ಸಿಟಿಜನ್ಶಿಪ್ ಆಫ್ ಇಂಡಿಯಾ ಕಾರ್ಡ್ (ಒಸಿಐ) ಮತ್ತು ವೀಸಾಗಳನ್ನು ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳು ಜಾರಿಯಲ್ಲಿರುವವರೆಗೂ ಅಮಾನತುಗೊಳಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.
ದೇಶದೊಳಗಿನ ಎಲ್ಲ ವಿದೇಶಿ ಪ್ರಜೆಗಳಿಗೆ ವೀಸಾ ಅವಧಿ ಮುಗಿದಿದ್ದು, ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧದಿಂದಾಗಿ ಭಾರತದಿಂದ ಹೊರ ಹೋಗಲು ಸಾಧ್ಯವಿಲ್ಲ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ತಮ್ಮ ವೀಸಾ ವಿಸ್ತರಣೆಗೆ ಮುಂದಿನ ದಿನಗಳಲ್ಲಿಅರ್ಜಿ ಸಲ್ಲಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಭಾರತದಲ್ಲಿ ವಾಸವಾಗಿರದ ಒಸಿಐ ಕಾರ್ಡುದಾರರಿಗೆ ನೀಡಲಾಗಿರುವ ವೀಸಾ - ಮುಕ್ತ ಪ್ರಯಾಣ ಸೌಲಭ್ಯವು ಭಾರತದಿಂದ ಮತ್ತು ಭಾರತಕ್ಕೆ ಪ್ರಯಾಣಿಸುವವರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ನಿಷೇಧವನ್ನು ತೆಗೆದುಹಾಕುವವರೆಗೆ ಈ ನಿಬಂಧೆನಗಳು ಮುಂದುವರಿಯುತ್ತದೆ ಎಂದು ರಾಯಭಾರ ಕಚೇರಿ ಹೇಳಿದೆ.
ಒಸಿಐ ಕಾರ್ಡ್ ಎನ್ನುವುದು ವಲಸೆ ನಾಗರಿಕರಿಗೆ ನೀಡುವುದಾಗಿದ್ದು, ಭಾರತೀಯ ಮೂಲದ ವಿದೇಶಿ ಪ್ರಜೆಗೆ ದೇಶದಲ್ಲಿ ಅನಿರ್ದಿಷ್ಟವಾಗಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶವಿದೆ. ಭಾರತೀಯ ವಲಸೆಗಾರರಿಂದ, ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಉಭಯ ಪೌರತ್ವದ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಒಸಿಐ ಅನ್ನು ಪರಿಚಯಿಸಲಾಗಿದೆ.
ಭಾರತಕ್ಕೆ ಪ್ರವೇಶಿಸುವ ಯಾವುದೇ ದೇಶದ ಪ್ರಜೆಗಳಿಗೆ ನೀಡಲಾಗುವ ಎಲ್ಲ ರೀತಿಯ ವೀಸಾಗಳನ್ನು, ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ನಿಷೇಧವನ್ನು ತೆಗೆದುಹಾಕುವವರೆಗೆ ಅಮಾನತುಗೊಳಿಸಲಾಗುವುದು. ಅಧಿಕೃತ ಪಾಸ್‌ಪೋರ್ಟ್ ಹೊಂದಿರುವವರು, ಯುಎನ್ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿರುವವರು ಮತ್ತು ಉದ್ಯೋಗ ಮತ್ತು ಪ್ರಾಜೆಕ್ಟ್ ಅಡಿ ನೀಡಲಾದ ವೀಸಾಗಳನ್ನು ಒಳಗೊಂಡಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡಿದ ನಿಮಿತ್ತ ಭಾರತವು ಮೇ 17 ರವರೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಚಾರವನ್ನು ಸ್ಥಗಿತಗೊಳಿಸಿದೆ.