ವಾಷಿಂಗ್ಟನ್(ಅಮೆರಿಕ): ಸೆಪ್ಟೆಂಬರ್ 24ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕ್ವಾಡ್ ನಾಯಕರ ಸಭೆ ಆಯೋಜಿಸಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ. ಈ ಸಭೆಯಲ್ಲಿ ಕ್ವಾಡ್ ಸದಸ್ಯ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ.
ಅಧ್ಯಕ್ಷ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದಾರೆ ಎಂದು ಶ್ವೇತಭವನ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಭೆಯಲ್ಲಿ ಕೋವಿಡ್ ವಿರುದ್ಧ ಹೋರಾಟ, ಹವಾಮಾನ ಬಿಕ್ಕಟ್ಟು, ತಂತ್ರಜ್ಞಾನ, ಸೈಬರ್‌ಸ್ಪೇಸ್ ಪಾಲುದಾರಿಕೆ ಹಾಗೂ ವಿಶೇಷವಾಗಿ ಇಂಡೋ - ಪೆಸಿಫಿಕ್ ಪ್ರದೇಶದ ಕುರಿತು ಈ ನಾಲ್ಕೂ ದೇಶಗಳ ನಾಯಕರು ಚರ್ಚೆ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 24ಕ್ಕೆ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ಈಗಾಗಲೇ ಜಪಾನ್ನ ಪ್ರಧಾನಿ ಯೋಶಿಹಿಡೆ ಸುಗಾ ಕ್ವಾಡ್ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
ಕ್ವಾಡ್ ಸಮೂಹವನ್ನು ಮತ್ತಷ್ಟು ಬಲಪಡಿಸಲು ಬೈಡನ್ - ಹ್ಯಾರಿಸ್ ಸರ್ಕಾರವು ನಿರ್ಧರಿಸಿದೆ. 21ನೇ ಶತಮಾನದ ಸಮಸ್ಯೆಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಇಂಡ ಪೆಸಿಫಿಕ್ ವಲಯದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಅಮೆರಿಕ ಹೇಳಿ ಕೊಂಡಿದೆ.
ಕ್ವಾಡ್ ಬಗ್ಗೆ ಮತ್ತಷ್ಟು..
ಕ್ವಾಡ್ ಅಂದರೆ ನಾಲ್ಕು ಎಂಬ ಅರ್ಥ ಬರುತ್ತದೆ. ಅಂದ್ರೆ ಪರಸ್ಪರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಾಲ್ಕು ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ಕಟ್ಟಿಕೊಂಡಿರುವ ಒಂದು ಸಮೂಹವೇ ಕ್ವಾಡ್ ಆಗಿದೆ. ಅದರಲ್ಲೂ ಭದ್ರತೆಯ ವಿಚಾರವಾಗಿ ಈ ಸಮೂಹ ಕೆಲಸ ಮಾಡುತ್ತದೆ. ಮಾರ್ಚ್ನಲ್ಲಿ ಮೊದಲ ವರ್ಚುಯಲ್ ಸಭೆ ನಡೆಸಲಾಗಿತ್ತು.
ಚೀನಾದ ಆಕ್ರಮಣಕಾರಿ ನೀತಿಗಳ ವಿರುದ್ಧ ಈ ಸಮೂಹವನ್ನು ಕಟ್ಟಿಕೊಳ್ಳಲಾಗಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. 2007ರಲ್ಲಿ ಆರಂಭವಾಗಿದ್ದ ಕ್ವಾಡ್, ಹೊಸ ನಿಯಮಗಳೊಂದಿಗೆ 2017ರಲ್ಲಿ ಮತ್ತೆ ಪುನಾರಂಭವಾಗಿತ್ತು. ಈ ಕ್ವಾಡ್ ಅನ್ನು QSD-Quadrilateral Security Dialogue ಎಂದೂ ಕರೆಯಲಾಗುತ್ತದೆ.
ಇದನ್ನೂ ಓದಿ: ಅಮೆರಿಕದಲ್ಲಿ ಕೋವಿಡ್ ಎಫೆಕ್ಟ್: ದೊಡ್ಡಣ್ಣನ ಖಜಾನೆಯಲ್ಲಿ ಆದಾಯದ ಕೊರತೆ!