ವಾಷಿಂಗ್ಟನ್: ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ಭಾರತ ಮೂಲದ ಅಮೆರಿಕನ್ ನೀರಾ ಟಂಡನ್ ಅವರನ್ನು ಬಜೆಟ್ ಮತ್ತು ನಿರ್ವಹಣಾ ಕಚೇರಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಮೆರಿಕದ ಖಜಾನೆ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿರುವ ಜಾನೆಟ್ ಯೆಲೆನ್ ಅವರೊಂದಿಗೆ ಕಾರ್ಯ ನಿರ್ವಹಿಸುವ ಸಲುವಾಗಿ ಉದಾರವಾದಿ ಆರ್ಥಿಕ ಸಲಹೆಗಾರರ ತಂಡವನ್ನು ನಿರ್ಮಿಸುವ ಬೈಡನ್ ಅವರ ಯೋಜನೆಯ ಒಂದು ಭಾಗವಾಗಿ ಟಂಡನ್ ಅವರನ್ನು ನೇಮಕ ಮಾಡಲಾಗುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಭಾನುವಾರ ವರದಿ ಮಾಡಿದೆ.
ಟಂಡನ್, ಯೆಲೆನ್ ಮತ್ತು ಇತರರ ನಾಮಪತ್ರವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಸುದ್ದಿ ವರದಿಗಳು ತಿಳಿಸಿವೆ. ಟಂಡನ್ ಅವರು ಮಾಜಿ ರಾಜ್ಯ ಕಾರ್ಯದರ್ಶಿ ಮತ್ತು 2016ರ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಆಪ್ತರಾಗಿದ್ದರು.