ವಾಷಿಂಗ್ಟನ್: ಕೊರೊನಾ ಕೇಕೆ ಕಡಿಮೆಯಾಗುವ ಸೂಚನೆ ಸಿಗುತ್ತಿಲ್ಲ. ವಿಶ್ವದ ದೊಡ್ಡಣ್ಣ ಕೊರೊನಾ ಕರಿನೆರಳಿನಡಿ ಒದ್ದಾಡುತ್ತಿದ್ದಾನೆ. ನಿನ್ನೆ ಒಂದೇ ದಿನ ಜಗತ್ತಿನ ಶಕ್ತಿಶಾಲಿ ದೇಶದಲ್ಲಿ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದೆ.
ಕಳೆದ 24 ಗಂಟೆಗಳೊಳಗೆ ಯುಎಸ್ಎನಲ್ಲಿ ದಾಖಲಾದ ಸಾವಿನ ಸಂಖ್ಯೆ 1,182. ನಿನ್ನೆಯಷ್ಟೇ ನಾಲ್ಕಂಕಿಯಲ್ಲಿದ್ದ ದೇಶದ ಒಟ್ಟು ಸಾವಿನ ಸಂಖ್ಯೆ ಇಂದು ಐದಂಕಿ ದಾಟಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ ಅಮೆರಿಕದಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 10,941. ಒಟ್ಟು ಸೋಂಕಿತರ ಸಂಖ್ಯೆ 3,67,629.
ವಿಶ್ವದಲ್ಲಿ 74,767ಕ್ಕೂ ಹೆಚ್ಚು ಸಾವು:
ಜಾಗತಿಕ ಅಂಕಿ-ಅಂಶಗಳನ್ನು ನೋಡುವುದಾದರೆ, ವಿಶ್ವದಲ್ಲಿ ಈವರೆಗೆ 74,767 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ 13,47,235 ಜನ ಸೋಂಕಿಗೊಳಗಾಗಿದ್ದರೆ, ಇದರಲ್ಲಿ 2,86,095 ಜನ ಗುಣಮುಖರಾಗಿದ್ದಾರೆ.
ಕಳೆದ 24 ಗಂಟೆಯಲ್ಲಿ ಚೀನಾದಲ್ಲಿ ದಾಖಲಾಗಿಲ್ಲ ಯಾವುದೇ ಸಾವು-ನೋವು:
ಇದೇ ಮೊದಲ ಬಾರಿಗೆ ಚೀನಾದಲ್ಲಿ ಒಂದು ನಿರ್ಧಿಷ್ಟ ದಿನದಲ್ಲಿ ಯಾವುದೇ ಸಾವು-ನೋವು ದಾಖಲಾಗದೇ ಇರುವುದು ವರದಿಯಾಗಿದೆ. ಈವರೆಗೆ ಚೀನಾದಲ್ಲಿ 3,331 ಜನ ಸಾವನ್ನಪ್ಪಿದ್ದು, ಒಟ್ಟು 81,740 ಜನರಿಗೆ ಸೋಂಕು ಬಾಧಿಸಿದೆ. ನಿನ್ನೆ ಯಾವುದೇ ಸಾವಿನ ವರದಿಯಾಗಿಲ್ಲ.
ಸೋಂಕು ಬಾಧಿಸಿದ ಪ್ರಮುಖ ರಾಷ್ಟ್ರಗಳ ಅಂಕಿ-ಅಂಶ:
ದೇಶ | ಒಟ್ಟು ಸೋಂಕಿತರು | ಒಟ್ಟು ಸಾವು |
ಯುಎಸ್ಎ | 3,67,629 | 10,941 |
ಸ್ಪೇನ್ | 1,36,675 | 13,341 |
ಇಟಲಿ | 1,32,547 | 16,523 |
ಜರ್ಮನಿ | 1,03,375 | 1,810 |
ಫ್ರಾನ್ಸ್ | 98,010 | 8,911 |
ಚೀನಾ | 81,740 | 3,331 |
ಬ್ರಿಟನ್ | 51,608 | 5,373 |
ಯುರೋಪ್ ರಾಷ್ಟ್ರಗಳ ಸ್ಥಿತಿ ಹೇಗಿದೆ ಗೊತ್ತಾ:
ಸ್ಪೇನ್, ಸಾವಿನ ಸಂಖ್ಯೆಯಲ್ಲಿ ಇನ್ನು ಕೆಲವೇ ದಿನದಲ್ಲಿ ಇಟಲಿಯನ್ನೂ ಮೀರಿಸುವಂತೆ ಕಾಣುತ್ತಿದೆ. ಈಗಾಗಲೇ ಇಲ್ಲಿನ ಸಾವಿನ ಸಂಖ್ಯೆ 13,341ಕ್ಕೇರಿದ್ದು, ಸೋಂಕಿತರ ಸಂಖ್ಯೆ 136,675 ದಾಟಿದೆ. ಅತ್ತ ಇಟಲಿಯಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಹತೋಟಿಗೆ ಬರುತ್ತಿದ್ದು, ಸಾವಿನ ಸಂಖ್ಯೆ 16,523ಕ್ಕೇರಿದ್ದರೆ, ಸೋಂಕಿತರ ಸಂಖ್ಯೆ 132,547ನ್ನು ದಾಟಿದೆ. ಇನ್ನೊಂದೆಡೆ ಫ್ರಾನ್ಸ್ನಲ್ಲಿ 8,911 ಜನಸಾವನ್ನಪ್ಪಿದ್ದು, 98,000ಕ್ಕೂ ಹೆಚ್ಚು ಜನರು ಸೋಂಕಿಗೊಳಗಾಗಿದ್ದಾರೆ. ಬ್ರಿಟನ್ನಲ್ಲಿ 5,373 ಜನಸಾವನ್ನಪ್ಪಿದ್ದರೆ, 51,608 ಜನರಿಗೆ ಸೋಂಕು ಬಾಧಿಸಿದೆ.