ವಾಷಿಂಗ್ಟನ್(ಅಮೆರಿಕ): ಚೀನಾದ ಆಕ್ರಮಣಶೀಲತೆ ಮತ್ತು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಅದು ವರ್ತಿಸುತ್ತಿರುವ ರೀತಿಯೇ ಕ್ವಾಡ್ ರಾಷ್ಟ್ರಗಳ ಮಧ್ಯೆ ಆಗಾಗ ಚರ್ಚೆಗೆ ಬರುವ ವಿಷಯವಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಶೀಲತೆ, ದಬ್ಬಾಳಿಕೆಯ ಸ್ವಭಾವ ಮತ್ತು ಹಕ್ಕುಗಳನ್ನು ಹತ್ತಿಕ್ಕುವ ರೀತಿಗೆ ವಿರುದ್ಧ ನಮ್ಮ ಮಿತ್ರ ರಾಷ್ಟ್ರಗಳು ಕ್ವಾಡ್ ಮೂಲಕ ತಂತ್ರ ರೂಪಿಸುತ್ತಿವೆ ಎಂದು ರಕ್ಷಣಾ ಇಲಾಖೆಯ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಮಾಹಿತಿ ನೀಡಿದ್ದಾರೆ.
ಗುರುವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಾನ್ ಕಿರ್ಬಿ ಕ್ವಾಡ್ ವ್ಯವಸ್ಥೆ ನಮಗೆ ಅದ್ಭುತವಾದುದನ್ನು ಸಾಧಿಸಲು ಅವಕಾಶ ನೀಡಿದೆ. ಎಲ್ಲರೂ ಒಟ್ಟಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ಸಂಚಾರಕ್ಕೆ ಸಂಬಂಧಿಸಿದಂತೆ ಕ್ವಾಡ್ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇದಕ್ಕೂ ಮತ್ತು ಚೀನಾಗೂ ಸಂಬಂಧವಿಲ್ಲ ಎಂದು ಕಿರ್ಬಿ ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 25 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇತೃತ್ವದಲ್ಲಿ ಕ್ವಾಡ್ ಸಭೆಯನ್ನು ನಡೆಸಿದ್ದರು. ಈ ವೇಳೆ ಇಂಡೋ- ಪೆಸಿಫಿಕ್ ಭಾಗದ ವಿಚಾರವಾಗಿ ಚರ್ಚೆ ನಡೆಸಲಾಯಿತು.
ಚೀನಾ ದಕ್ಷಿಣ ಚೀನಾ ಸಮುದ್ರದ ಭಾಗವನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ. ತೈವಾನ್, ಫಿಲಿಪ್ಪಿನ್ಸ್ , ಬ್ರೂನಿ, ಮಲೇಷ್ಯಾ ಮತ್ತು ವಿಯೆಟ್ನಾಂ ರಾಷ್ಟ್ರಗಳ ಮೇಲೆ ಅಧಿಪತ್ಯ ಸ್ಥಾಪನೆಗೆ ಯತ್ನಿಸುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳು ಮತ್ತು ಮಿಲಿಟರಿ ಬೇಸ್ಗಳನ್ನು ಸ್ಥಾಪನೆ ಮಾಡಿದೆ ಎಂಬ ಆರೋಪವಿದೆ.
2007ರಲ್ಲಿ ಆರಂಭವಾಗಿದ್ದ ಕ್ವಾಡ್, ಹೊಸ ನಿಯಮಗಳೊಂದಿಗೆ 2017ರಲ್ಲಿ ಮತ್ತೆ ಪುನಾರಂಭವಾಗಿತ್ತು. ಈ ಕ್ವಾಡ್ ಅನ್ನು QSD-Quadrilateral Security Dialogue ಎಂದೂ ಕರೆಯಲಾಗುತ್ತದೆ. ಸೆಪ್ಟೆಂಬರ್ 25ರಂದು ನೂತನ ಕ್ವಾಡ್ನ ಮೊದಲ ವೈಯಕ್ತಿಕ ಸಭೆ ನಡೆದಿದೆ.
ಇದನ್ನೂ ಓದಿ: ಐಸಿಸ್ನಿಂದ ಅಫ್ಘಾನಿಸ್ತಾನ ಪುನಾರಚನೆ ಸಾಧ್ಯತೆ ಇದೆ: ಮಾರ್ಕ್ ಮಿಲ್ಲೆ ಆತಂಕ