ವಾಷಿಂಗ್ಟನ್(ಅಮೆರಿಕ): ಕೊರೊನಾ ವಿಚಾರದಿಂದಾಗಿ ಚೀನಾ ಮೇಲೆ ಮುನಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದಲ್ಲಿ ಟಿಕ್ಟಾಕ್ಗೆ ನಿರ್ಬಂಧ ಹೇರಿದ್ದು, ಇದೀಗ ಇ-ಕಾಮರ್ಸ್ನ ದೈತ್ಯ ಎನ್ನಲಾದ ಅಲಿಬಾಬಾ ಸೇರಿದಂತೆ ಚೀನಾದ ಒಡೆತನದ ಇತರ ಕಂಪನಿಗಳು ಸೇರಿದಂತೆ ಇನ್ನಿತರ ಆ್ಯಪ್ಗಳನ್ನು ನಿಷೇಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿ ಟಿಕ್‌ಟಾಕ್ ಸೇರಿದಂತೆ ಚೀನಾದ 59 ಆ್ಯಪ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ದೇಶದ ಭದ್ರತೆಗೆ ಈ ಆ್ಯಪ್ಗಳಿಂದ ಅಪಾಯವಿದೆ ಎಂದು ಭಾರತ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ದೇಶದಲ್ಲಿಯೂ ಟಿಕ್‌ಟಾಕ್ ಬ್ಯಾನ್ ಮಾಡುವುದಾಗಿ ಹೇಳಿಕೆ ನೀಡಿದ್ದರು.
ಇತ್ತೀಚಿನ ವರದಿ ಪ್ರಕಾರ, ಅಮೆರಿಕದಲ್ಲಿ ಕೇವಲ ಟಿಕ್‌ಟಾಕ್ ಮಾತ್ರವಲ್ಲದೇ, ಬೈಟ್‌ಡ್ಯಾನ್ಸ್ ಹಾಗೂ ಬಹು ಮುಖ್ಯವಾಗಿ ಅಲಿಬಾಬಾ ಸೇರಿದಂತೆ ಚೀನಾದ ಎಲ್ಲ ಆ್ಯಪ್ಗಳನ್ನು ನಿಷೇಧ ಮಾಡಲು ಅಮೆರಿಕ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಈ ತಿಂಗಳ ಆರಂಭದಲ್ಲಿ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ, ಟ್ರಂಪ್ ಆಡಳಿತವು ಅಮೆರಿಕನ್ನರನ್ನು ರಕ್ಷಿಸಲು ಶ್ರಮಿಸುತ್ತಿದೆ. ವಿಶ್ವಾಸಾರ್ಹವಲ್ಲದ ಮಾರಾಟಗಾರರಾದ ಟಿಕ್‌ಟಾಕ್ ಮತ್ತು ವೀಚಾಟ್ ಮತ್ತು ಇನ್ನಿತರ ಚೀನಾ ದೇಶದ ಆ್ಯಪ್ಗಳನ್ನು ಆ್ಯಪಲ್ ಮತ್ತು ಗೂಗಲ್ನಿಂದ ಹಾಗೂ ಯುಎಸ್ ಆ್ಯಪ್ ಸ್ಟೋರ್‌ಗಳಿಂದ ತೆಗೆದುಹಾಕಲು ಸೂಚನೆ ನೀಡಿದ್ದರು.
ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗಿನ ಸಂಬಂಧದಿಂದಾಗಿ ಬೀಜಿಂಗ್ ಮೂಲದ ಸ್ಟಾರ್ಟ್ಅಪ್ ಬೈಟ್ ಡ್ಯಾನ್ಸ್ ಒಡೆತನದ ಟಿಕ್ ಟಾಕ್ ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಅಮೆರಿಕದ ವಿರೋಧ ಪಕ್ಷಗಳು ಟ್ರಂಪ್ ಸರ್ಕಾರವನ್ನು ಈ ಹಿಂದೆ ತೀವ್ರವಾಗಿ ಟೀಕಿಸಿತ್ತು.
ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಂಘರ್ಷದಿಂದಾಗಿ, ಗೂಗಲ್, ಹುವೈ ಮತ್ತು ಐಫೋನ್ ಉತ್ಪಾದನೆ ಹಾಗೂ 5G ಇಂಟರ್‌ನೆಟ್ ಸೇವೆಯ ಮೇಲೂ ಪರಿಣಾಮ ಉಂಟಾಗಿದೆ ಎಂದು ಅಮೆರಿಕ ಹೇಳಿದೆ.
ಟಿಕ್‌ಟಾಕ್ ಅಮೆರಿಕದ ಜನರ ವೈಯುಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಭಾರತವು ಕೂಡ ಈ ಅಪ್ಲಿಕೇಷನ್‌ನಿಂದ ದೇಶದ ಭದ್ರತೆಗೆ ದಕ್ಕೆಯುಂಟಾಗಲಿದೆ ಎನ್ನುವ ಕಾರಣಕ್ಕೆ ನಿಷೇಧವನ್ನು ಹೇರಿದೆ. ನಾವೂ ಕೂಡ ಅತೀ ಶೀಘ್ರದಲ್ಲಿ ಟಿಕ್‌ಟಾಕ್ ಮೇಲೆ ನಿಷೇಧ ಹೇರಲಿದ್ದೇವೆ ಎಂದು ಟ್ರಂಪ್ ಈ ಹಿಂದೆ ಮಾಹಿತಿ ನೀಡಿದ್ದರು. ಆದರೆ ಇದೀಗ ಕೇವಲ ಟಿಕ್‌ಟಾಕ್ ಮಾತ್ರವಲ್ಲದೇ, ಚೀನಾದ ಎಲ್ಲ ಆ್ಯಪ್ಗಳನ್ನು ಅಮೆರಿಕದಲ್ಲಿ ನೀಷೇಧಗೊಳಿಸಲು ಟ್ರಂಪ್ ಸರ್ಕಾರ ಮುಂದಾಗಿದೆ.