ಫ್ರೀಟೌನ್(ಸಿಯೆರಾ ಲಿಯೋನ್): ತೈಲ ಟ್ಯಾಂಕರ್ ಸ್ಫೋಟಗೊಂಡು ಸುಮಾರು 92 ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ ದೇಶವಾದ ಸಿಯೆರಾ ಲಿಯೋನ್ನ ರಾಜಧಾನಿ ಫ್ರೀಟೌನ್ ನಗರದಲ್ಲಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ.
ಫ್ರೀಟೌನ್ನ ಪೂರ್ವಕ್ಕಿರುವ ವೆಲ್ಲಿಂಗ್ಟನ್ ಎಂಬಲ್ಲಿ ಘಟನೆ ನಡೆದಿದೆ. ಟ್ಯಾಂಕರ್ಗೆ ಬಸ್ಸೊಂದು ಡಿಕ್ಕಿ ಹೊಡೆದಿತ್ತು. ಈ ವೇಳೆ ಟ್ಯಾಂಕರ್ನಿಂದ ಇಂಧನ ಸೋರಿಕೆ ಆಗಿದ್ದು, ಇದನ್ನು ತುಂಬಿಕೊಳ್ಳಲು ಜನರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಸ್ಫೋಟ ಸಂಭವಿಸಿದೆ. ಪರಿಣಾಮ, ಸಾಕಷ್ಟು ಮಂದಿಯ ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಾಟ್ ಆಸ್ಪತ್ರೆಯ ವರದಿಯ ಪ್ರಕಾರ, 92 ಮಂದಿ ಸಾವನ್ನಪ್ಪಿದ್ದಾರೆ. 30 ಮಂದಿ ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಫೋಡೆ ಮುಸಾ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಹಲವು ವಾಹನಗಳೂ ಕೂಡಾ ಸುಟ್ಟು ಭಸ್ಮವಾಗಿವೆ.
ಸಿಯೆರಾ ಲಿಯೋನ್ ಅಧ್ಯಕ್ಷ ಜ್ಯೂಲಿಯಸ್ ಮಾಡ ಬಯೊ ಹಾಗೂ ಉಪಾಧ್ಯಕ್ಷ ಮೊಹಮದ್ ಜುಲ್ದೆ ಜಲ್ಹೋ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿ ಮತ್ತು ಸ್ವಯಂಸೇವಾ ಸಂಘಟನೆಗಳಿಂದ ರಕ್ಷಣಾ ಕಾರ್ಯ ಜರುಗುತ್ತಿದೆ.
ಇದನ್ನೂ ಓದಿ: ಹ್ಯೂಸ್ಟನ್ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ನೂಕುನುಗ್ಗಲು: 8 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ