ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣ ಮುಂದುವರಿದಿದೆ. ದೇಶದ ಎರಡನೇ ದೊಡ್ಡ ನಗರವಾದ ಕಂದಹಾರ್ ಅನ್ನೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಮತ್ತೊಂದೆಡೆ, ಅಫ್ಘಾನ್ ಸರ್ಕಾರವು ದೇಶದಲ್ಲಿ ಹಿಂಸಾಚಾರವನ್ನು ನಿಗ್ರಹಿಸಲು ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ತಾಲಿಬಾನ್ ಜೊತೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಸಿದ್ಧತೆ ನಡೆಸಿದೆ. ಈ ಸಂಬಂಧ ಕತಾರ್‌ನಲ್ಲಿರುವ ಅಫ್ಘಾನ್ ಸರ್ಕಾರದ ಪ್ರತಿನಿಧಿಗಳು ಪ್ರಸ್ತಾಪವನ್ನು ತಾಲಿಬಾನ್ ಮುಂದೆ ಇಟ್ಟಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವ ಉದ್ದೇಶದಿಂದ ಮಧ್ಯಸ್ಥಿಕೆ ವಹಿಸುತ್ತಿರುವ ಕತಾರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ. ಅಫ್ಘಾನಿಸ್ತಾನದ ಪ್ರಮುಖ ಪ್ರದೇಶಗಳನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಕಾಬೂಲ್‌ನಿಂದ ಈ ನಿರ್ಧಾರ ಹೊರ ಬಂದಿದೆ.
ಇದನ್ನೂ ಓದಿ: ತಾಲಿಬಾನ್‌ಗಳ ಮುಂದಿನ ಟಾರ್ಗೆಟ್ ಕಾಬೂಲ್!; ಅಫ್ಘಾನ್‌ನಲ್ಲಿರುವ ಭಾರತೀಯ ಜರ್ನಲಿಸ್ಟ್‌ಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ಅಫ್ಘಾನಿಸ್ತಾನದಿಂದ ಅಮೆರಿಕ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ತಾಲಿಬಾನ್ ಸಂಘಟನೆ ಹಿಂಸಾಚಾರಕ್ಕೆ ಇಳಿದಿತ್ತು. ಈಗಾಗಲೇ ಪ್ರಮುಖ ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ನಿನ್ನೆ ರಾಜಧಾನಿ ಕಾಬೂಲ್‌ನಿಂದ 150 ಕಿಲೋಮೀಟರ್ ದೂರದಲ್ಲಿರುವ ಘಜ್ನಿ ಪಟ್ಟಣವನ್ನು ವಶಪಡಿಸಿಕೊಂಡಿದ್ದಾರೆ.
ಕಾಬೂಲ್-ಕಂದಹಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲಿಬಾನ್ ಪ್ರಮುಖ ನಗರವನ್ನು ಆಕ್ರಮಿಸಿಕೊಂಡಿದೆ ಎಂದು ಆಂತರಿಕ ಸಚಿವಾಲಯ ದೃಢಪಡಿಸಿದೆ. ಈಗಾಗಲೇ ಸರ್ಕಾರವು ಉತ್ತರ ಮತ್ತು ಪಶ್ಚಿಮ ಅಫ್ಘಾನ್‌ನ ಬಹುಭಾಗವನ್ನು ಕಳೆದುಕೊಂಡಿದೆ. ಇದರ ಬೆನ್ನಲ್ಲೇ ಅಧಿಕಾರ ಹಂಚಿಕೊಳ್ಳುವ ಪ್ರಸ್ತಾವನೆಗೆ ಮುಂದಾಗಿದೆ ಎನ್ನಲಾಗಿದೆ.