ವಾಷಿಂಗ್ಟನ್ : ಹಾಲಿವುಡ್ನಲ್ಲಿ 'ಮಾಸ್ಟರ್ ಆಫ್ ಸ್ಟೋರಿ ಟೇಲಿಂಗ್' ಎಂದೇ ಖ್ಯಾತರಾಗಿರುವ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ನಿರ್ದೇಶಕ ರಾಜಮೌಳಿ 'ಗೋಲ್ಡನ್ ಗ್ಲೋಬ್ ಅವಾರ್ಡ್'ನಲ್ಲಿ ಭೇಟಿಯಾಗಿರುವ ಫೋಟೋವನ್ನು ಹಂಚಿಕೊಂಡು, 'ನಾನು ದೇವರನ್ನು ಭೇಟಿಯಾದೆ' ಎಂದು ಬರೆದುಕೊಂಡಿದ್ದಾರೆ.
ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ: ಭಾರತಕ್ಕೆ ಪ್ರತಿಷ್ಠಿತ ಗ್ಲೋಲ್ಡನ್ ಗ್ಲೋಬ್ ಅವಾರ್ಡ್ ತಂದುಕೊಟ್ಟ 'ಆರ್ ಆರ್ ಆರ್' ಚಿತ್ರದ ʼನಾಟು ನಾಟುʼ ಹಾಡು ಇದೀಗ ವಿದೇಶಿ ಮಂದಿಯಲ್ಲೂ ಮೋಡಿ ಮಾಡಿದೆ. 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ನಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಈ ವೇಳೆ ಸಂತಸವನ್ನು ಹಂಚಿಕೊಂಡು ನಿರ್ದೇಶಕ ರಾಜಮೌಳಿ ಅವರು ʼಆರ್ ಆರ್ ಆರ್ʼ ಪಾರ್ಟ್ -2 ಮಾಡುವ ಬಗ್ಗೆಯೂ ಮಾತಾನಾಡಿದ್ದರು. ಬಾಹುಬಲಿ ಸರಣಿಯಂತಹ ಐತಿಹಾಸಿಕ ಸಿನಿಮಾಗಳನ್ನು ಕೊಟ್ಟಿರುವ ರಾಜಮೌಳಿ ತನ್ನ ಮೆಚ್ಚಿನ ನಿರ್ದೇಶಕರನ್ನು ಭೇಟಿಯಾಗಿದ್ದಾರೆ.
'ನಾನು ದೇವರನ್ನು ಭೇಟಿಯಾದೆ': ಈ ಸಮಾರಂಭದಲ್ಲಿ ಅವರು ವಿಶೇಷ ವ್ಯಕ್ತಿಯನ್ನು ಭೇಟಿಯಾದ ಸಂತಸ ವ್ಯಕ್ತಪಡಿಸಿದ್ದಾರೆ. 'ನಾನು ದೇವರನ್ನು ಭೇಟಿಯಾದೆ' ಎಂದು ಹೇಳಿದ್ದಾರೆ. ರಾಜಮೌಳಿ ಭೇಟಿಯಾದ ದೇವರು ಮತ್ಯಾರು ಅಲ್ಲ ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್. ವಿಶ್ವ ಸಿನಿಮಾರಂಗದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಭೇಟಿಯಾಗಿ ಭಾವಪರವಶರಾಗಿದ್ದಾರೆ. ಸ್ಟೀವನ್ ಸ್ಪೀಲ್‌ಬರ್ಗ್ ತನ್ನ ದೇವರು ಎಂದು ರಾಜಮೌಳಿ ಕರೆದಿದ್ದಾರೆ. ಸ್ಟೀವನ್ ಜೊತೆ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಪೋಸ್ಟ್ ಮಾಡಿದ ಕೂಡಲೇ, ಅಭಿಮಾನಿಗಳು ಕಾಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 'ಸಿನಿಮಾ ಮೀಟ್ಸ್ ಸಿನಿಮಾ' ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. "ನೀವಿಬ್ಬರೂ ನಮ್ಮ ಬಾಲ್ಯವನ್ನು ಸ್ಮರಣೀಯವಾಗಿಸಿದ ದಂತಕಥೆಗಳು" ಎಂದು ಮತ್ತೊಬ್ಬ ಅಭಿಮಾನಿ ಬರೆದಿದ್ದಾರೆ.
ಆರ್ ಆರ್ ಆರ್ ಚಿತ್ರದ 'ನಾಟು ನಾಟು' ಹಾಡು ಜ.10 ರಂದು 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ನಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಐತಿಹಾಸಿಕ ಗೆಲುವಿನ ನಂತರ, ರಾಜಮೌಳಿ 'ಆರ್‌ಆರ್‌ಆರ್ ತಂಡದ ಮೇಲೆ ಪ್ರೀತಿಯನ್ನು ಧಾರೆಯೆರೆದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದರು.
ಆರ್‌ಆರ್‌ಆರ್ ಚಿತ್ರ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರ ವಿಶ್ವಾದ್ಯಂತ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಶ್ರಿಯಾ ಸರನ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
ಅಮೆರಿಕದ ಥಿಯೇಟರ್‌ಗಳಲ್ಲಿ ಆರ್‌ಆರ್‌ಆರ್ ಪ್ರದರ್ಶನ: ಆರ್‌ಆರ್‌ಆರ್ ಈ ವರ್ಷದ ಗೋಲ್ಡನ್ ಗ್ಲೋಬ್‌ನಲ್ಲಿ ವಿದೇಶಿ ಭಾಷೆಯ ಅತ್ಯುತ್ತಮ ಚಲನಚಿತ್ರ ಮತ್ತು ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆಗಾಗಿ ನಾಮನಿರ್ದೇಶನಗೊಂಡಿತ್ತು. ಈ ಹಿನ್ನೆಲೆಯಲ್ಲಿ ದೊಡ್ಡ ಈವೆಂಟ್‌ಗೆ ಮುಂಚಿತವಾಗಿ ಅಂತಾರಾಷ್ಟ್ರೀಯ ಮೆಚ್ಚುಗೆ ಗಳಿಸಿರುವ ಚಲನಚಿತ್ರವನ್ನು LA ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿತ್ತು.
ಸ್ಟೀವನ್ ಸ್ಪೀಲ್‌ಬರ್ಗ್ ಬಗ್ಗೆ ಒಂದಿಷ್ಟು..: ಸ್ಟೀವನ್ ಸ್ಪೀಲ್ಬರ್ಗ್ ಹಾಲಿವುಡ್ ನಲ್ಲಿ ʼ ಇಂಡಿಯಾನಾ ಜೋನ್ಸ್ʼ ಸರಣಿಯ ಸಿನಿಮಾಗಳಲ್ಲಿ ಖ್ಯಾತನಾಮರಾದವರು. ಜಾವಸ್, ಜುರಾಸಿಕ್ ಪಾರ್ಕ್, ಕಲರ್ ಪರ್ಪಲ್, ವೆಸ್ಟ್ ಸೈಡ್ ಸ್ಟೋರಿ ಹೀಗೆ 100ಕ್ಕೂ ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದಾರೆ. 2023 ಗೋಲ್ಡನ್ ಗ್ಲೋಬ್ ನಲ್ಲಿ 'ದಿ ಫ್ಯಾಬೆಲ್‌ಮ್ಯಾನ್ಸ್' ಸಿನಿಮಾಕ್ಕಾಗಿ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಆರ್‌ಆರ್‌ಆರ್ ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ!