ಕನ್ನಡ ಮತ್ತು ತೆಲುಗು ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಸಂಜನಾ ಗಲ್ರಾನಿ ಮೊದಲ ಉಮ್ರಾ ನೆರವೇರಿಸಿದ್ದಾರೆ. ತನ್ನ ಕುಟುಂಬದೊಂದಿಗೆ ಉಮ್ರಾ ಮಾಡಲು ಸೌದಿ ಅರೇಬಿಯಾದ ಮೆಕ್ಕಾಗೆ ತೆರಳಿದ್ದು, ಉಮ್ರಾ ಅನುಭವವನ್ನು ಅವರು ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ವಿವರಿಸಿದ್ದಾರೆ.
ಮೆಕ್ಕಾದಲ್ಲಿನ ಲಿವಿಂಗ್ ರೂಂನಿಂದ ಕಾಣುವ ನೋಟ ಅದ್ಭುತವಾಗಿದೆ. ಹರಮ್‌ನ ಮೇಲಿನ ದೃಶ್ಯಗಳನ್ನು ನೋಡುವ ರೀತಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಸಂಜನಾ ಹೇಳಿದ್ದಾರೆ. ಕಾಬಾದ ಮುಂದೆ ನಿಂತು 5 ಬಾರಿ ನಮಾಜ್ ಅನ್ನು ಸುಲಭವಾಗಿ ನೆರವೇರಿಸಿದ ಬಗ್ಗೆ ನಟಿ ಸಂತಸ ಹಂಚಿಕೊಂಡಿದ್ದಾರೆ. "ಉಮ್ರಾ ಮಾಡಲು ಇದು ನನ್ನ ಜೀವನದ ಮೊದಲ ಪ್ರಯಾಣ. ಮೆಕ್ಕಾದಲ್ಲಿ ನಾಲ್ಕು ಹಗಲು ಮೂರು ರಾತ್ರಿ ಕಳೆದೆವು. ಇಸ್ಲಾಮಿಕ್ ಸಂಪ್ರದಾಯದ ಎಲ್ಲ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿ ಮತ್ತು ಗೌರವಿಸುವ ಮೂಲಕ ಮೊದಲ ಉಮ್ರಾ ನಿರ್ವಹಿಸಿದ್ದೇನೆ. ನನಗೆ ತಿಳಿದಿರುವ ಜನರಿಗಾಗಿ ಮಾತ್ರವಲ್ಲ, ಜಗತ್ತಿನಲ್ಲಿ ತೀವ್ರ ದುಃಖ, ನಿರರ್ಥಕತೆ ಮತ್ತು ನೋವಿನಲ್ಲಿರುವವರಿಗಾಗಿ ನಾನು ಪ್ರಾರ್ಥಿಸಿದ್ದೇನೆ" ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಡಾಕ್ಟರ್ ಮತ್ತು ಆ್ಯಕ್ಟರ್ ಶೈಲಿಯಲ್ಲಿ ಮಗನ ಫಸ್ಟ್ ಫೋಟೋಶೂಟ್ ಮಾಡಿಸಿದ ಸಂಜನಾ ಗಲ್ರಾನಿ
ಸಂಜನಾ ಗಲ್ರಾನಿ ಬೆಂಗಳೂರು ಮೂಲದ ವೈದ್ಯ ಅಜೀಜ್ ಪಾಷಾ ಅವರನ್ನು ಮದುವೆಯಾಗಿದ್ದಾರೆ. 2018ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು 'ಮಹಿರಾ' ಎಂದು ಬದಲಿಸಿಕೊಂಡಿದ್ದರು. ತಾವು ಮದುವೆ ಆಗಿರುವ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಆದರೆ ಡ್ರಗ್ಸ್ ಪ್ರಕರಣದ ಸಮಯದಲ್ಲಿ ಆಕೆ ಮದುವೆ ಆಗಿರುವ ಸುದ್ದಿ ರಿವೀಲ್ ಆಗಿತ್ತು.
ಮೇ 19 ರಂದು ಮಗ ಅಲಾರಿಕ್ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಜನಾ ಗಲ್ರಾನಿ ಮೆಕ್ಕಾದಲ್ಲಿ ಆಚರಿಸಿದ್ದಾರೆ. ಮೂಲತಃ ಸಿಂಧಿ ಕುಟುಂಬಕ್ಕೆ ಸೇರಿದ ಸಂಜನಾ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಕಾಲೇಜಿನಲ್ಲಿರುವಾಗಲೇ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದು ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ತೆಲುಗಿನ 'ಸೊಗ್ಗಾಡು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ತಮಿಳು ಸಿನಿಮಾದಲ್ಲಿ ನಟಿಸಿದರು. 2006 ರಲ್ಲಿ ಕನ್ನಡದ ಗಂಡ ಹೆಂಡತಿ ಸಿನಿಮಾ ಮೂಲಕ ಕನ್ನಡಕ್ಕೆ ಬಂದರು.
'ಗಂಡ ಹೆಂಡತಿ' ಸಿನಿಮಾದಲ್ಲಿ ಅವರು ಬೋಲ್ಡ್ ಆಗಿ ನಟಿಸಿ ಸುದ್ದಿಯಾಗಿದ್ದರು. ಜಾಕ್ ಪಾಟ್, ಅರ್ಜುನ್, ಬುಜ್ಜಿಗಾಡು, ಹುಡುಗ ಹುಡುಗಿ, ಮೈಲಾರಿ, ಈ ಸಂಜೆ, ಮುಗ್ಗುರು, ಕ್ಯಾಸಿನೋವ ಸೇರಿ ಕನ್ನಡ, ತಮಿಳು, ತೆಲುಗು ಭಾಷೆ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರ...ಮೌಲ್ವಿ ವಿರುದ್ದ ದೂರು ದಾಖಲಿಸಿದ ವಕೀಲ..!
ಏನಿದು ಉಮ್ರಾ?: ಹಿಂದೂ ಧರ್ಮದಲ್ಲಿ ಕಾಶಿ ಯಾತ್ರೆ, ಕೇದಾರನಾಥ ಯಾತ್ರೆ, ಪಂಚತೀರ್ಥಗಳು ಇತ್ಯಾದಿ ಪವಿತ್ರ ಧಾರ್ಮಿಕ ತೀರ್ಥ ಯಾತ್ರೆಗಳಿವೆಯೋ ಅದೇ ರೀತಿ ಇಸ್ಲಾಂ ಧರ್ಮದಲ್ಲಿ ಧಾರ್ಮಿಕವಾಗಿ ಮಹತ್ವ ಪಡೆದಿರುವ ಪವಿತ್ರ ಯಾತ್ರೆ ಎಂದರೆ ಅದು ವಾರ್ಷಿಕವಾಗಿ ನಡೆಯುವ ಹಜ್ . ಹಜ್ ಯಾತ್ರೆಯ ಸಂಕ್ಷಿಪ್ತ ರೂಪವೇ ಉಮ್ರಾ. ಹಜ್ ಕಡ್ಡಾಯ ಎಂಬ ರೀತಿಯಲ್ಲಿದ್ದರೆ ಉಮ್ರಾ ಕಡ್ಡಾಯವಾಗಿ ಮಾಡಬೇಕಾದ ಆಚರಣೆಯಾಗಿಲ್ಲ. ಅರೇಬಿಕ್ ಭಾಷೆಯಲ್ಲಿ ಉಮ್ರಾ ಎಂದರೆ ಜನನಿಬಿಡ ಸ್ಥಳಕ್ಕೆ ಭೇಟಿ ನೀಡುವುದು ಎಂದರ್ಥ.
ಉಮ್ರಾದ ಮಹತ್ವ: ಉಮ್ರಾ ಆಚರಣೆ ಬಹುವಾಗಿ ಚರ್ಚಿತವಾಗಲ್ಲ. ಆದರೂ ಇದು ಇದರದ್ದೇ ಆದ ಮಹತ್ವವನ್ನು ಹೊಂದಿದೆ. ವ್ಯಕ್ತಿಯೊಬ್ಬ ಈ ಆಚರಣೆ ಮೂಲಕ ತನ್ನ ಧರ್ಮದಲ್ಲಿ ಹೆಚ್ಚಿನ ನಿಷ್ಠೆ ಹೊಂದುವವನಲ್ಲದೆ, ಪ್ರಾರ್ಥನೆ ಹಾಗೂ ಕ್ಷಮಾಪಣೆಯನ್ನು ಭಗವಂತನಲ್ಲಿ ಬೇಡಿಕೊಳ್ಳಲು ಅವಕಾಶವನ್ನು ಯಾತ್ರೆ ನೀಡುತ್ತದೆ. ಯಾವ ವ್ಯಕ್ತಿ ಈ ಆಚರಣೆ ನೆರವೇರಿಸುವನೋ ಆ ವ್ಯಕ್ತಿ ತನ್ನೆಲ್ಲ ಪಾಪ ಕರ್ಮಗಳಿಂದ ಮುಕ್ತನಾಗುತ್ತಾನೆ ಎಂಬುದು ಮುಸ್ಲಿಮರ ನಂಬಿಕೆ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ ; ಅದ್ಧೂರಿ ಸೀಮಂತದ ಫೋಟೋ ಹಂಚಿಕೊಂಡ ಬಹುಭಾಷಾ ತಾರೆ