ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಗೆಲ್ಲಬೇಕು ಎಂಬ ಛಲ ಇರುವವರು ಏನು ಬೇಕಾದರೂ ಸಾಧನೆ ಮಾಡ್ತಾರೆ. ಈ ಮಾತನ್ನ ನಿಜ ಮಾಡಿದವರು ಹಾಸ್ಯ ನಟ ಮೋಹನ್ ಜುನೇಜ. ಕಿರುತೆರೆ ಹಾಗೂ ಬೆಳ್ಳಿ ತೆರೆ ಮೇಲೆ ತನ್ನದೇ ಬಾಡಿ ಲಾಂಗ್ವೇಜ್ನಿಂದಲೇ ಮಿಂಚುತ್ತಿದ್ದ ಮೋಹನ್ ಜುನೇಜ ಇಹಲೋಕ ತ್ಯಜಿಸಿದ್ದಾರೆ. ಹಲವು ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ನಿನ್ನೆ ರಾತ್ರಿ ಚಿಕ್ಕಬಾಣವರದ ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಸರಿ ಸುಮಾರು 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಕೊನೆಗೂ ಈಡೇರಲಿಲ್ಲ ಹಾಸ್ಯ ನಟ ಮೋಹನ್ ಜುನೇಜಾ ಕನಸು!
ತಮ್ಮ ಕಾಮಿಡಿ ಟೈಮಿಂಗ್ ಹೆಸರುವಾಸಿಯಾಗಿದ್ದ ಮೋಹನ್ ಜುನೇಜಗೆ 54 ವರ್ಷ ವಯಸ್ಸಾಗಿತ್ತು. ಮೂಲತಃ ಬೆಂಗಳೂರಿನವರಾದ ಅವರು ಯಾವುದೇ ಗಾಡ್ ಫಾದರ್ ಇಲ್ಲದೇ ಸಿನಿಮಾ ಇಂಡಸ್ಟ್ರಿಗೆ ಬಂದು ಅಂದುಕೊಂಡಿದ್ದನ್ನು ಸಾಧಿಸಿದ ನಟ. ತಮ್ಮ 17ನೇ ವಯಸ್ಸಿನಲ್ಲಿ ಸಿನಿಮಾ ಹಾಗೂ ಕಥೆ ಬರೆಯುವ ಹವ್ಯಾಸ ಹೊಂದಿದ್ದ ಮೋಹನ್ ಜುನೇಜ, ಬೀದಿ ನಾಟಕಗಳಿಗೆ ಕಥೆಗಳನ್ನ ಬರೆಯುತ್ತಾ, ಅದೇ ನಾಟಕಗಳಲ್ಲಿ ಬಹಳ ಚೆನ್ನಾಗಿ ಅಭಿನಯ ಮಾಡುತ್ತಿದ್ದರಂತೆ. ಇದೇ ನಾಟಕಗಳಿಂದ ಮೋಹನ್ ಜುನೇಜಗೆ ದೊಡ್ಡ ಬ್ರೇಕ್ ಸಿಗುತ್ತೆ ಅಂತಾ ಅಂದು ಕೊಂಡಿರಲಿಲ್ಲ.
ಹೀಗೆ ಒಮ್ಮೆ ಮೋಹನ್ ತಮ್ಮ ತಂಡದೊಂದಿಗೆ ಬೀದಿ ನಾಟಕ ಮಾಡಬೇಕಾದರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಣ್ಣಿಗೆ ಬಿದ್ದರು. ಆಗ ನಾಗತಿಹಳ್ಳಿ ಚಂದ್ರಶೇಖರ್ ವಠಾರ ಸೀರಿಯಲ್ನಲ್ಲಿ ಒಂದು ಪಾತ್ರಕ್ಕೆ ಅವರನ್ನ ಆಯ್ಕೆ ಮಾಡ್ತಾರೆ. ಅಲ್ಲಿಂದ ಮೋಹನ್ ಜುನೇಜಾ ಕಿರುತೆರೆ ಎಂಟ್ರಿ ಆಗುತ್ತೆ. ಈ ಸೀರಿಯಲ್ನಲ್ಲಿ ವಿಭಿನ್ನ ಮ್ಯಾನರಿಸಂನಿಂದ ಅವರು ಬಹಳ ಬೇಗನೆ ಕಿರುತೆರೆ ಪ್ರೇಕ್ಷಕರ ಮನಸ್ಸು ಕದಿಯುತ್ತಾರೆ. ಆದರೆ, ವಠಾರ ಧಾರಾವಾಹಿಯಲ್ಲಿ ಅವರ ಪಾತ್ರ ಹೆಚ್ಚು ಇರುವುದಿಲ್ಲ. ಆದರೆ, ಆ ವೇಳೆ ಮೋಹನ್ ಆ್ಯಕ್ಟಿಂಗ್ ಅಲ್ಲದೇ, ಲೈಟ್ಮ್ಯಾನ್ ಆಗಿಯೂ ಕೆಲಸ ಮಾಡ್ತಾ ಗಮನ ಸೆಳೆದಿದ್ದರು.
ವಠಾರ ಧಾರಾವಾಹಿ ಮೂಲಕ ಪ್ರಭಾಕರ್ ಗಮನ ಸೆಳೆದ ನಟ: ವಠಾರ ಧಾರಾವಾಹಿ ಮೂಲಕ ಟೈಗರ್ ಪ್ರಭಾಕರ್ ಅವರ ಗಮನ ಸೆಳೆದ ಮೋಹನ್ ಅವರ ಜೊತೆಗೆಯೇ 'ವಾಲ್ ಪೋಸ್ಟರ್' ಎಂಬ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮೊದಲ ಬಾರಿಗೆ ಎಂಟ್ರಿ ನೀಡಿತ್ತಾರೆ. ಅಲ್ಲಿಂದ ಸ್ಟಾರ್ ನಟರಾದ ಶಿವರಾಜ್ ಕುಮಾರ್, ರವಿಚಂದ್ರನ್ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನ ಮಾಡುತ್ತಲೇ ಬಂದವರು. ಆದರೆ, ತಾವು ಮಾಡುವ ಪಾತ್ರಗಳು ಅಷ್ಟೊಂದು ಹೆಸರು ತಂದು ಕೊಡದ ಹಿನ್ನೆಲೆಯಲ್ಲಿ ಮತ್ತೆ ಸೀರಿಯಲ್ಗಳತ್ತ ಮುಖ ಮಾಡಬೇಕಾಯಿತು. ಆಗ ಅವರಿಗೆ ಬಂದಿದ್ದೇ ಗಣೇಶ್ ನಟನೆಯ 'ಚೆಲ್ಲಾಟ' ಸಿನಿಮಾದ ಬಂಪರ್ ಆಫರ್!
ಈ ಸಿನಿಮಾದಲ್ಲಿ ಬಹು ಮುಖ್ಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅವರ ಬಣ್ಣದ ಬದುಕೇ ಬದಲಾಯಿತು ಅಂದ್ರೆ ತಪ್ಪಾಗಲಾರದು. ಇಲ್ಲಿಂದ ನಟರಾದ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ರವಿಚಂದ್ರನ್, ಪುನೀತ್ ರಾಜ್‍ಕುಮಾರ್, ಉಪೇಂದ್ರ, ಸುದೀಪ್, ಗಣೇಶ್, ಅಲ್ಲದೇ ಹೊಸ ನಟರ ಸಿನಿಮಾಗಳಲ್ಲಿ ಅಭಿನಯಿಸಿ ಕಾಮಿಡಿ ನಟರಾಗಿ ಗುರುತಿಸಿಕೊಳ್ಳುತ್ತಾರೆ.
ಇತ್ತೀಚೆಗೆ ಬಿಡುಗಡೆಯಾದ ಯಶ್ ಅಭಿನಯದ ಕೆಜಿಎಫ್ ಒನ್ ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ 'ಇವನು ಗ್ಯಾಂಗ್ಸ್ಟರ್ ಅಲ್ಲ ಮಾನ್ಸ್ಟಾರ್' ಅಂತಾ ಹೇಳುವ ಡೈಲಾಗ್ನಿಂದಲೇ ಹೆಚ್ಚು ಪ್ರಖ್ಯಾತಿ ಹೊಂದಿದ್ದರು. ಇನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆ ಸೇರಿದಂತೆ ಬರೋಬ್ಬರಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅವರ ಸಾಧನೆ.
ಅಶ್ವಿನ್ ಹಾಗೂ ಅಕ್ಷಯ್ ಅಂತಾ ಇಬ್ಬರು ಗಂಡು ಮಕ್ಕಳನ್ನು ಹೊಂದಿರುವ ಮೋಹನ್ ಬಹು ದೊಡ್ಡ ಆಸೆ ಇತ್ತಂತೆ. ಅದು ಏನಪ್ಪ ಅಂದ್ರೆ, ಎರಡನೇ ಮಗ ಅಕ್ಷಯ್ ನನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಬೇಕು ಅನ್ನೋದು ಅವರ ಜೀವನದ ಕನಸಾಗಿತ್ತಂತೆ. ಆದರೆ, ವಿಧಿಯಾಟದ ಮುಂದೆ ಮೋಹನ್ ಜುನೇಜ ಕೊನೆಯ ಆಸೆ ಕನಸಾಗಿ ಉಳಿದಿದ್ದು ದುರಂತವೇ ಸರಿ.
ಇದನ್ನೂ ಓದಿ: ಕೆಜಿಎಫ್ ನಟ ಮೋಹನ್ ಜುನೇಜ ವಿಧಿವಶ.. ಸಂಜೆ ಅಂತ್ಯಕ್ರಿಯೆ
ಅಂದುಕೊಂಡಂತೆ ತಮ್ಮ ಜೀವನವನ್ನ ಕಳೆದ ಮೋಹನ್ ಜುನೇಜ, ಪತ್ನಿ ಕುಸುಮ, ಇಬ್ಬರು ಮಕ್ಕಳಾದ ಅಶ್ವಿನ್ ಹಾಗೂ ಅಕ್ಷಯ್ ಅವರನ್ನು ಬಿಟ್ಟು ಅಗಲಿದ್ದಾರೆ. ಹೆಸರುಘಟ್ಟ ರಸ್ತೆಯಲ್ಲಿರೋ ತಮ್ಮೇನಹಳ್ಳಿ ಹತ್ತಿರ ರುದ್ರಭೂಮಿಯಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ಅವರ ಅಂತ್ಯಸಂಸ್ಕಾರ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ತನ್ನ ಗುಂಗುರು ಕೂದಲು ಹಾಗೂ ಕಪ್ಪು ಬಣ್ಣದಿಂದ ತನ್ನದೇ ಛಾಪು ಮೂಡಿಸಿದ ಮೋಹನ್ ಜುನೇಜ ಇನ್ನು ನೆನಪು ಮಾತ್ರ ಅನ್ನೋದು ಬಹಳ ನೋವಿನ ಸಂಗತಿ.