'ರಾಮಾ ರಾಮಾ ರೇ', 'ಒಂದಲ್ಲಾ ಎರಡಲ್ಲಾ', 'ಮ್ಯಾನ್ ಆಫ್ ದಿ ಮ್ಯಾಚ್' ನಂತಹ ಅಪರೂಪದ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿರುವ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ನಿರ್ಮಾಣದ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಸತ್ಯ ಮತ್ತು ಮಯೂರ ಪಿಕ್ಚರ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಅನ್ ಲಾಕ್ ರಾಘವ’ ಸಿನಿಮಾದ ಶೀರ್ಷಿಕೆ ಹಾಗು ಫಸ್ಟ್ ಲುಕ್ ಅನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ಮಾಪಕ ಸತ್ಯಪ್ರಕಾಶ್ ಮಾತನಾಡಿ, "ದೀಪಕ್ ಮಧುವನಹಳ್ಳಿ ಈ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಅನೂಪ್ ಸೀಳಿನ್ ಅದ್ಭುತ ಸಂಗೀತ ಕೊಟ್ಟಿದ್ದಾರೆ. ಇಡೀ ಸಿನಿಮಾದಲ್ಲಿ ಕಾಮಿಡಿ ಇದೆ, ನಿಜಕ್ಕೂ ಪ್ರೇಕ್ಷಕರ ಅಭಿರುಚಿಗೆ ತಕ್ಕಂತಹ ಚಿತ್ರ" ಎಂದರು.
'ವೀಕೆಂಡ್' ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನವ ನಟ ಮಿಲಿಂದ್ ನಾಯಕನಾಗಿ ಹಾಗೂ 'ಲವ್ ಮಾಕ್ಟೇಲ್ 2' ಚಿತ್ರದ ರೇಚಲ್ ಡೇವಿಡ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ಸುಂದರ್ ವೀಣಾ, ಧರ್ಮಣ್ಣ ಕಡೂರು, ಭೂಮಿಶೆಟ್ಟಿ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
'ಅನ್ ಲಾಕ್ ರಾಘವ’ ಸಿನಿಮಾಕ್ಕೆ ಲವಿತ್ ಛಾಯಾಗ್ರಹಣ ಹಾಗೂ ಅಜಯ್ ಕುಮಾರ್ ಸಂಕಲನವಿದೆ. ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಯೋಜನೆ ರೂಪಿಸಿದೆ.
ಇದನ್ನೂ ಓದಿ: 'ವಿಕ್ರಾಂತ್ ರೋಣ' ಬಿಡುಗಡೆ ದಿನಕ್ಕೆ ಸಾಕ್ಷಿಯಾಗಲಿದೆ ಈ ಸ್ನೇಹ ಬಾಂಧವ್ಯದ ಕಟೌಟ್!