ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗೂ ಹಲವಾರು ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಪ್ರತಿಷ್ಠಿತ ವಿಆರ್ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿಜಯ ಸಂಕೇಶ್ವರ್ ಅವರ ಕುರಿತು ನಿರ್ಮಾಣಗೊಳ್ಳುತ್ತಿರುವ 'ವಿಜಯಾನಂದ' ಸಿನಿಮಾದ ಟೀಸರ್ ಅನಾವರಣಗೊಂಡಿದೆ.

ಸದ್ಯ ರಿವೀಲ್ ಆಗಿರುವ ಟೀಸರ್ನಲ್ಲಿ ಸಂಕೇಶ್ವರ್, ಸಣ್ಣ ಕೆಲಸದಿಂದ ಜೀವನ ಶುರು ಮಾಡಿ, ಹೇಗೆ ಲಾರಿ ಉದ್ಯಮದಲ್ಲಿ ಯಶಸ್ವಿ ಕಾಣ್ತಾರೆ ಅನ್ನೋದು ಹೇಳಲಾಗಿದೆ. ಸಂಕೇಶ್ವರ್ ಪಾತ್ರದಲ್ಲಿ ಕರ್ನಾಟಕದ ಪ್ರತಿಭಾವಂತ ಯುವ ನಟ ಹಾಗೂ ರಂಗಭೂಮಿ ಹಿನ್ನೆಲೆ ಹೊಂದಿರುವ ನಿಹಾಲ್ ಅವರು ಮಿಂಚಿದ್ದಾರೆ. ಇದರ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹಿರಿಯ ನಟ ಅನಂತ್ನಾಗ್ ಪಾತ್ರಗಳು ಬಹಳ ಮಹತ್ವ ಹೊಂದಿದೆ. ಟೀಸರ್ನಲ್ಲಿ ಬರುವ ಒಂದು ಡೈಲಾಗ್ ತಂದೆಯ ಮಾತನ್ನ ಧಿಕ್ಕರಿಸಿ ಯಶಸ್ವಿ ಬಿಜಿನೆಸ್ ಮ್ಯಾನ್ ಆದ ರೋಚಕ ಕಥೆ ಇದೆ.

ಇಂದು ಉದ್ಯಮಿ ಡಾ.ವಿಜಯ ಸಂಕೇಶ್ವರ್ ಅವರ ಹುಟ್ಟು ಹಬ್ಬ ಇರುವ ಕಾರಣ ವಿಜಯಾನಂದ ಚಿತ್ರದ ಟೀಸರ್ ಅನ್ನ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಟ್ರಂಕ್ ಎಂಬ ಕನ್ನಡದ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದ ಮಹಿಳಾ ನಿರ್ದೇಶಕಿ ರಿಷಿಕಾ ಶರ್ಮಾ ಈಗ ಈ ವಿಜಯಾನಂದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕನ್ನಡ ಚಿತ್ರ ರಂಗದಲ್ಲಿ ಸತತವಾಗಿ 8 ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ, ಸಿನಿಮಾ ಹಾಗೂ ಸೀರಿಯಲ್ ನಟನೆ, ಕಲಾ ವಿನ್ಯಾಸ, ವಸ್ತ್ರವಿನ್ಯಾಸ ಹೀಗೆ... ಹಲವಾರು ವಿಭಾಗಗಳಲ್ಲಿ ಅನುಭವವನ್ನು ಹೊಂದಿರುವ ರಿಷಿಕಾ ಅವರು ಕನ್ನಡ ಚಿತ್ರ ರಂಗದ ಭೀಷ್ಮ ಎಂದೇ ಹೆಸರಾದ ಜೆ.ವಿ . ಅಯ್ಯರ್ ಅವರ ಗರಡಿಯಲ್ಲಿ ಪಳಗಿದವರು.
- " class="align-text-top noRightClick twitterSection" data="">
1976ನೇ ಇಸವಿಯಲ್ಲಿ ಒಂದು ಟ್ರಕ್ನಿಂದ ಶುರುವಾಗಿ ಇವತ್ತಿಗೆ ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ, ಪತ್ರಿಕೆ ಹಾಗೂ ಮಾಧ್ಯಮ ರಂಗದಲ್ಲಿ ನಡೆದು ಬಂದ ವಿಜಯ ಸಂಕೇಶ್ವರ್ ಅವರ ಅಧ್ಭುತ ಹಾಗೂ ರೋಚಕ ಕಥೆಯನ್ನು ಈ ಚಿತ್ರ ಒಳಗೊಂಡಿರುತ್ತೆ.

ಇನ್ನು ನಿರ್ದೇಶಕಿ ರಿಷಿಕಾ ಶರ್ಮಾ ಸಾಕಷ್ಟು ವರ್ಷಗಳಿಂದ ಸತತವಾಗಿ ಈ ಚಿತ್ರಕ್ಕೆ ಸಿದ್ಧತೆಯನ್ನು ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ತೆಲುಗು ಮತ್ತು ಮಲಯಾಳಂ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ.

ಇನ್ನು ಸಂಕೇಶ್ವರ್ ಪುತ್ರರಾದ ಆನಂದ ಸಂಕೇಶ್ವರ್, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿ, ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಸದ್ಯ ವಿಜಯಾನಂದ ಟೀಸರ್ ಬಿಡುಗಡೆ ಆಗಿದ್ದು, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿ ಬರಲಿದೆ.

ಇದನ್ನೂ ಓದಿ: ಗಣಿ ಗಾಳಿಪಟ 2 ಚಿತ್ರಕ್ಕೆ ಸಾಥ್ ಕೊಟ್ಟ ಹ್ಯಾಟ್ರಿಕ್ ಹೀರೋ, ರಿಯಲ್ ಸ್ಟಾರ್, ರಮೇಶ್ ಅರವಿಂದ್!