ಸಿಸಿಎಲ್ ಕ್ರಿಕೆಟ್ ಆಟದಿಂದ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ರಾಜೀವ್. ಸದ್ಯ ಉಸಿರೇ ಉಸಿರೇ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ರಂಜಿಸಲು ಬರುತ್ತಿದ್ದಾರೆ. ಉಸಿರೇ ಉಸಿರೇ ಸಿನಿಮಾದ ಚಿತ್ರೀಕರಣ ಈಗಾಗಲೇ ಅಂತಿಮ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜಾಗಿರೋ
ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಯಹಸ್ತ ಸಿಕ್ಕಿದೆ. ಸಿ ಎಂ ವಿಜಯ್ ನಿರ್ದೇಶನದ ಉಸಿರೇ ಉಸಿರೇ ಚಿತ್ರದ ಟ್ರೇಲರ್ನ್ನು ಇತ್ತೀಚಿಗೆ ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು.
![usire-usire-kannada-cinema trailer released By Kicha sudeep](https://etvbharatimages.akamaized.net/etvbharat/prod-images/31-10-2023/19901836_yyyn.jpg)
ಓರಾಯನ್ ಮಾಲ್ನ ಸುಂದರ ಹೊರಾಂಗಣದ ಜಗಮಗಿಸುವ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ, ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್, "ಉಸಿರೇ ಉಸಿರೇ" ನನ್ನ ಗೆಳೆಯ ರಾಜೀವ್ ನಾಯಕನಾಗಿ ನಟಿಸಿರುವ ಚಿತ್ರ. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ದೇವರಾಜ್, ತಾರಾ, ಬ್ರಹ್ಮಾನಂದಂ, ಅಲಿ ಮುಂತಾದ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ಮಾಪಕ ಪ್ರದೀಪ್ ಯಾದವ್, ನಿರ್ದೇಶಕ ಸಿ ಎಂ ವಿಜಯ್ ಹಾಗೂ ನಾಯಕ ರಾಜೀವ್ ಸಾಕಷ್ಟು ಶ್ರಮಪಟ್ಟು ಉತ್ತಮವಾದ ಚಿತ್ರ ಮಾಡಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರವನ್ನು ತಾವೆಲ್ಲ ನೋಡಿ ಪ್ರೋತ್ಸಾಹಿಸಬೇಕು ಎಂದರು.
ಬಳಿಕ ನಟ ರಾಜೀವ್ ಮಾತನಾಡಿ, ನಮ್ಮ ಚಿತ್ರದ ಹೆಸರು "ಉಸಿರೇ ಉಸಿರೇ". ನನ್ನ ಉಸಿರು ಸುದೀಪ್ ಸರ್. ಅವರನ್ನು ಕಂಡರೆ ನನಗೆ ಅಷ್ಟು ಪ್ರೀತಿ. ಅವರು ನನಗೆ ನೀಡುತ್ತಿರುವ ಸಹಕಾರಕ್ಕೆ ನಾನು ಆಭಾರಿ. ಇಡೀ ಚಿತ್ರತಂಡದ ಶ್ರಮದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಟ್ರೇಲರ್ ಬಿಡುಗಡೆಯಾಗಿದ್ದು ಎಲ್ಲರಿಗೂ ಇಷ್ಟ ಆಗುತ್ತೆ ಎಂದು ಹೇಳಿದರು.
![usire-usire-kannada-cinema trailer released By Kicha sudeep](https://etvbharatimages.akamaized.net/etvbharat/prod-images/31-10-2023/19901836_yy.jpg)
ನಿರ್ದೇಶಕ ಸಿ. ಎಂ ವಿಜಯ್ ಮಾತನಾಡಿ, ಸುದೀಪ್ ಸರ್ ಅವರ ಮುಂದೆ ನನಗೆ ಮಾತೇ ಬರುತ್ತಿಲ್ಲ. ಇಡೀ ತಂಡದ ಸಹಕಾರದಿಂದ "ಉಸಿರೇ ಉಸಿರೇ" ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟ ಅಲಿ ಮಾತನಾಡಿ, ನನಗೆ ಬಾಲಿವುಡ್ನಲ್ಲಿ ಶಾರುಖ್ ಖಾನ್ ಪರಿಚಯ. ಸ್ಯಾಂಡಲ್ ವುಡ್ನಲ್ಲಿ ಕಿಚ್ಚ ಸುದೀಪ್ ಪರಿಚಯ. ಈ ಚಿತ್ರದಲ್ಲಿ ನನ್ನ, ಬ್ರಹ್ಮಾನಂದಂ, ಸಾಧುಕೋಕಿಲ ಹಾಗೂ ಮಂಜು ಪಾವಗಡ ಅವರ ಕಾಂಬಿನೇಶನ್ನಲ್ಲಿ ಹಾಸ್ಯ ಸನ್ನಿವೇಶಗಳು ಚೆನ್ನಾಗಿ ಬಂದಿವೆ ಎಂದರು.
ನಿರ್ಮಾಪಕ ಪ್ರದೀಪ್ ಯಾದವ್ ಮಾತನಾಡಿ, ನಮ್ಮ ಚಿತ್ರದ ಆರಂಭದ ದಿನದಿಂದಲೂ ಸುದೀಪ್ ಅವರು ತುಂಬಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಸಿನೆಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಅವರಿಗೆ ಧನ್ಯವಾದ. ಮೊದಲ ಬಾರಿಗೆ ಕನ್ನಡದಲ್ಲಿ ಖ್ಯಾತ ನಟರಾದ ಬ್ರಹ್ಮಾನಂದಂ ಹಾಗೂ ಅಲಿ ಅವರು ಒಟ್ಟಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.
ರಾಜೀವ್ಗೆ ಜೋಡಿಯಾಗಿ ಶ್ರೀಜಿತ ಘೋಶ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಡೈನಾಮಿಕ್ ಸ್ಟಾರ್ ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಮಂಜು ಪಾವಗಡ, ಶೈನಿಂಗ್ ಸೀತರಾಮ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡಿದ್ದು, ಸದ್ಯ ಟ್ರೈಲರ್ ನಿಂದ ಎಲ್ಲರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ : 'Chef ಚಿದಂಬರ' ಮಾತಿನ ಮನೆಯಲ್ಲಿ ಅನಿರುದ್ಧ್ ಜತ್ಕರ್: ಡಬ್ಬಿಂಗ್ ಕೆಲಸ ಚುರುಕು