ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅಮೋಘ ಅಭಿನಯದಿಂದ ತನ್ನದೇ ಬೇಡಿಕೆ ಹೊಂದಿರುವ ನಟ ಕಿಶೋರ್. ಇದೀಗ ಮೂರು ವಿಚಾರಗಳಿಗೆ ಕಿಶೋರ್ ಟಾಕ್ ಆಫ್ ದಿ ನ್ಯೂಸ್ ಆಗಿದ್ದಾರೆ. ಹೌದು, ಕಿಶೋರ್ ಮುಖ್ಯ ಭೂಮಿಕೆಯಲ್ಲಿರುವ ಎರಡು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗಲು ಸಿದ್ಧವಾಗಿದೆ. ಅದು ಕೂಡ ಒಂದೇ ದಿನ.
ಒಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ತಮಿಳಿನ ಪೊನ್ನಿಯಿನ್ ಸೆಲ್ವನ್ ಹಾಗೂ ಟೈಟಲ್, ಟ್ರೈಲರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರೋ ಕಾಂತಾರ ಸಿನಿಮಾ. ಸೆಪ್ಟೆಂಬರ್ 30ರಂದು ಒಂದೇ ದಿನ ಈ ಎರಡು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ನಿರ್ದೇಶಕ, ನಟ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದಲ್ಲಿ ಕಿಶೋರ್ ಖಡಕ್ ಅರಣ್ಯ ಅಧಿಕಾರಿ ಪಾತ್ರ ವಹಿಸಿದ್ದಾರೆ. ಕಾಂತಾರ ಟ್ರೈಲರ್ ಅನ್ನು ಮಿಲಿಯನ್ಗಟ್ಟಲೇ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಸದ್ಯ ರಿವೀಲ್ ಆಗಿರುವ ಕಾಂತಾರ ಟ್ರೈಲರ್ನಲ್ಲಿ ಕಿಶೋರ್ ಮತ್ತು ರಿಷಬ್ ಶೆಟ್ಟಿ ಮುಖಾಮುಖಿ ಸಂಘರ್ಷ ಜೋರಾಗಿದೆ. ಮತ್ತೊಂದು ವಿಶೇಷ ಅಂದ್ರೆ ರಾಜಕುಮಾರ, ಕೆಜಿಎಫ್, ಸಲಾರ್ ಸಿನಿಮಾಗಳ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಅಂದಹಾಗೆ ಕಿಶೋರ್ ಮತ್ತು ರಿಷಬ್ ನಡುವಿನ ಒಡನಾಟ ಇಂದು ನಿನ್ನೆಯದಲ್ಲ. ಕೆಲ ವರ್ಷಗಳ ಹಿಂದೆ ತೆರೆಕಂಡಿದ್ದ ಅಟ್ಟಹಾಸ ಚಿತ್ರದಲ್ಲಿ ವೀರಪ್ಪನ್ ಪಾತ್ರದಲ್ಲಿ ಕಿಶೋರ್ ನಟಿಸಿದ್ದರು. ಆ ಸಿನಿಮಾಗೆ ರಿಷಬ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಳಿಕ ರಕ್ಷಿತ್ ಶೆಟ್ಟಿಯ ಉಳಿದವರು ಕಂಡಂತೆ ಚಿತ್ರದಲ್ಲೂ ರಿಷಬ್ ಮತ್ತು ಕಿಶೋರ್ ಇದ್ದರು.
ಇದೀಗ ಕಾಂತಾರ ಸಿನಿಮಾದಲ್ಲಿ ಮತ್ತೊಮ್ಮೆ ಜೊತೆಯಾಗಿದ್ದಾರೆ. ಕರಾವಳಿ ಸೊಗಡಿನ ಕಥೆಯಾಗಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ಜನರು ನಟಿಸಿದ್ದಾರೆ. ದೇಶಾದ್ಯಂತ ಕಾಂತಾರ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಇದರ ಜೊತೆಗೆ ತಮಿಳು ನಿರ್ದೇಶಕ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಕಿಶೋರ್ ಅವರು ರವಿ ದಾಸನ್ ಎಂಬ ಖಳನಾಯಕನ ಪಾತ್ರವನ್ನು ಮಾಡಿದ್ದಾರೆ. ಈ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಆದಿತ್ಯ ಕರಿಕಾಲನ್ ಪಾತ್ರದಲ್ಲಿ ವಿಕ್ರಮ್ ನಟಿಸಿದ್ದಾರೆ.
ಅರುಲ್ಮೋಳಿ ವರ್ಮನ್ ಪಾತ್ರದಲ್ಲಿ ಜಯಂ ರವಿ, ವಲ್ಲವರಾಯನ್ ವಂದಿಯಾದೇವನ್ ಪಾತ್ರವನ್ನು ಕಾರ್ತಿ, ನಂದಿನಿ ಮತ್ತು ಮಂದಾಕಿನಿ ದೇವಿಯಾಗಿ ಐಶ್ವರ್ಯಾ ರೈ ಬಚ್ಚನ್, ಕುಂದವೈ ಪಿರತ್ತಿಯಾರ್ ಪಾತ್ರದಲ್ಲಿ ತ್ರಿಷಾ, ಸುಂದರ ಚೋಳ ಆಗಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ. ಕನ್ನಡದಲ್ಲೂ ಪೊನ್ನಿಯಿನ್ ಸೆಲ್ವನ್ ಸಿನಿಮಾ ರಿಲೀಸ್ ಆಗುತ್ತಿದ್ದು, ಕನ್ನಡ ಸಿನಿಮಾ ಪ್ರೇಕ್ಷಕರು ಪೊನ್ನಿಯಿನ್ ಸೆಲ್ವನ್ ದೊಡ್ಡ ಮಟ್ಟದ ನಿರೀಕ್ಷೆ ಹೊಂದಿದ್ದಾರೆ.
ಇದನ್ನೂ ಓದಿ: 'ಪೊನ್ನಿಯಿನ್ ಸೆಲ್ವನ್' ಮಣಿರತ್ನಂ ಅವರ ಕನಸಿನ ಸಿನಿಮಾ: ನಟ ವಿಕ್ರಮ್
ಹೀಗೆ ಕಿಶೋರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಎರಡು ಬಹು ನಿರೀಕ್ಷಿತ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿವೆ. ಈ ಮಧ್ಯೆ ವಿಭಿನ್ನ ಟೈಟಲ್ ರೆಡ್ ಕಾಲರ್ ಚಿತ್ರದ ಮೂಲಕ ಬಾಲಿವುಡ್‌ಗೆ ಕಿಶೋರ್ ಪದಾರ್ಪಣೆ ಮಾಡುತ್ತಿದ್ದಾರೆ. ಕನ್ನಡದ ರಥಾವರ ಚಿತ್ರದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈ ಹಿಂದಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಈ ಮೂಲಕ ಕಿಶೋರ್ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಬಳಿಕ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಮುಂದಾಗುವ ಮೂಲಕ ಬಹುಮುಖ ಪ್ರತಿಭೆಯ ನಟ ಅನ್ನೀದನ್ನು ಪ್ರೂವ್ ಮಾಡಿದ್ದಾರೆ.