ಥಳುಕು-ಬಳುಕಿನ ಬಣ್ಣದ ಯುಗದಲ್ಲಿ ಒಂದೇ ಹವ್ಯಾಸ ಇಟ್ಟುಕೊಂಡು ಬಂದವರು ದೀರ್ಘ ಕಾಲದವರೆಗೆ ಉಳಿದುಕೊಳ್ಳುವುದು ತೀರಾ ಕಡಿಮೆ. ಇಲ್ಲಿ ನೃತ್ಯ, ನಟನೆ, ನಿರ್ದೇಶನ, ಗಾಯನ ಸೇರಿದಂತೆ ಹಲವು ಹವ್ಯಾಸ ಮತ್ತು ಪ್ರತಿಭೆ ಇದ್ದವರು ಮಾತ್ರ ಹೆಚ್ಚು ದಿನ ಉಳಿದುಕೊಳ್ಳಬಹುದು. ಒಟ್ಟಿನಲ್ಲಿ ಸಿನಿಮಾ ಎಂಬ ದೊಡ್ಡ ಪರದೆಯಲ್ಲಿ ಮಿಂಚಬೇಕೆಂದರೆ ಒಂದು ಸವಾಲಿನ ಕೆಲಸವೂ ಹೌದು. ಈ ಸವಾಲನ್ನು ಸ್ವೀಕರಿಸಿದ ಕೆಲವು ಬಾಲಿವುಡ್ ತಾರೆಯರು ಆರಂಭದಲ್ಲಿ ಏನಾಗಿದ್ದರು? ಅವರ ಕೆಲಸ ಏನಾಗಿತ್ತು ಅನ್ನೋದನ್ನು ನೋಡುವುದಾದರೆ...
![Top Bollywood stars who started out as background dancers](https://etvbharatimages.akamaized.net/etvbharat/prod-images/285191399_569643164576618_8760756885068484426_n_2607newsroom_1658841892_431.jpg)
ಶಾಹಿದ್ ಕಪೂರ್: ಬಾಲಿವುಡ್‌ನ ಹಿರಿಯ ನಟ ಪಂಕಜ್ ಕಪೂರ್ ಅವರ ಮಗನಾಗಿದ್ದರೂ ಶಾಹಿದ್ ಕಪೂರ್ ಓರ್ವ ಹೋರಾಟಗಾರನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಲಕನಾಗಿದ್ದಾಗ ಅವರು ಸ್ಥಳೀಯ ಜಾಹೀರಾತುಗಳಲ್ಲಿ ನಟಿಸಿದರು. ಬಳಿಕ ಹಿನ್ನೆಲೆ ನೃತ್ಯಗಾರನಾಗಿ ಆ ಬಳಿಕ ನಟನಾಗಿ ಕಾಣಿಸಿಕೊಂಡರು. 'ತಾಲ್' ಮತ್ತು ದಿಲ್ ತೋ ಪಾಗಲ್ ಹೈ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರರಾಗಿ ನಟಿಸಿದ್ದಾರೆ. ಅವರು 2003 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಕಾಮಿಡಿ ಇಷ್ಕ್ ವಿಷ್ಕ್‌ನಲ್ಲಿ ಪ್ರಮುಖ ಪಾತ್ರದೊಂದಿಗೆ ಬಾಲಿವುಡ್ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು.
![Top Bollywood stars who started out as background dancers](https://etvbharatimages.akamaized.net/etvbharat/prod-images/283233276_427099602289425_4411555812283293849_n_2607newsroom_1658841892_229.jpg)
ದಿಯಾ ಮಿರ್ಜಾ: 2000ರಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ದಿಯಾ ಮಿರ್ಜಾ ಅವರ ಹಾದಿ ಕೂಡ ಅಷ್ಟು ಸಲೀಸಾಗಿರಿಲಿಲ್ಲ. ಸೌಂದರ್ಯ ಪ್ರದರ್ಶನಲ್ಲಿ ಹೆಸರು ಮಾಡುವುದಕ್ಕೂ ಮನ್ನ ಅವರು ಹಿನ್ನೆಲೆ ನೃತ್ಯಗಾರ್ತಿಯಾಗಿದ್ದರು. 1999 ರಲ್ಲಿ ಬಿಡುಗಡೆಯಾದ ತಮಿಳು 'ಎನ್ಸ್ವಾಸ ಕಾತ್ರೆ' ಚಿತ್ರದ ಜುಂಬಾಲಕ ಎಂಬ ಶೀರ್ಷಿಕೆಯ ಹಾಡಿನಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿದ್ದರು. 2001ರಲ್ಲಿ ಬಿಡುಗಡೆಯಾದ ರೆಹನಾ ಹೈ ಟೆರ್ರೆ ದಿಲ್ ಮೇ ಚಿತ್ರದ ಮೂಲಕ ಅವರು ಬಾಲಿವುಡ್ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು.
![Top Bollywood stars who started out as background dancers](https://etvbharatimages.akamaized.net/etvbharat/prod-images/56323829_372726303455928_3823377606250120283_n_2607newsroom_1658841892_585.jpg)
ಸುಶಾಂತ್ ಸಿಂಗ್ ರಜಪೂತ್: ದಿವಂಗತ ಸುಶಾಂತ್ ಸಿಂಗ್ ರಜಪೂತ್ ಕೂಡ ಓರ್ವ ಹಿನ್ನೆಲೆ ನೃತ್ಯಗಾರರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಕೆಲವು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ಶಮಕ್ ದಾವರ್ಸ್ ಡ್ಯಾನ್ಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿಯಾಗಿದ್ದ ರಜಪೂತ್ 'ಧೂಮ್ 2' ಚಿತ್ರದ ಹಾಡೊಂದರಲ್ಲಿ ಹಿನ್ನೆಲೆ ನೃತ್ಯಗಾರರಲ್ಲಿ ಕಾಣಿಸಿಕೊಂಡರು. ಅದಕ್ಕೂ ಮುನ್ನ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕೆಲವು ಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದಾರೆ. ಅಭಿಷೇಕ್ ಕಪೂರ್ ನಿರ್ದೇಶನದ ಕಾಯ್ ಪೋಚೆ ಚಿತ್ರದ ಮೂಲಕ ಬಾಲಿವುಡ್ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು.
![Top Bollywood stars who started out as background dancers](https://etvbharatimages.akamaized.net/etvbharat/prod-images/282093819_1431533287363665_3842119241248968339_n_2607newsroom_1658841892_366.jpg)
ದೀಪಿಕಾ ಪಡುಕೋಣೆ: ಪ್ರಸ್ತುತ ಬಾಲಿವುಡ್ ಇಂಡಸ್ಟ್ರಿಯನ್ನು ಆಳುತ್ತಿರುವ ನಟಿ ದೀಪಿಕಾ ಪಡುಕೋಣೆ ಮಾಡೆಲಿಂಗ್ ಮತ್ತು ಜಾಹೀರಾತುಗಳ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಆದರೆ, ಇವರು ಕೂಡ ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದ್ದಾಳೆ ಎಂದು ಹಲವರಿಗೆ ಗೊತ್ತೇ ಇಲ್ಲ. ಓರ್ವ ರೂಪದರ್ಶಿಯಾಗಿ ಗಮನ ಸೆಳೆದ ಅವರು ಈಗ ಬಾಲಿವುಡ್ ಚಲನಚಿತ್ರಗಳಲ್ಲಿ ಅಭಿನೇತ್ರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಮೇಶ್ ರೇಶಮಿಯಾ ಅವರ ಪಾಪ್ ಆಲ್ಬಮ್ ಆಪ್ ಕಾ ಸುರೂರ್ ಮ್ಯೂಸಿಕ್ ವಿಡಿಯೋದಲ್ಲಿ ನಾಮ್ ಹೈ ತೇರಾ ಎಂಬ ಹಾಡಿಗೆ ಮೊಟ್ಟ ಮೊದಲು ನೃತ್ಯಗಾರರಾಗಿ ಕಾಣಿಸಿಕೊಂಡರು.
![Top Bollywood stars who started out as background dancers](https://etvbharatimages.akamaized.net/etvbharat/prod-images/275448018_537768377594736_1409794236538923774_n_2607newsroom_1658841892_719.jpg)
ಡೈಸಿ ಶಾ: ಇವರು ಕೂಡ ಹಿನ್ನೆಲೆ ನೃತ್ಯಗಾರರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಕೆಲವು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಸಹ ಮಾಡಿದ್ದಾರೆ. ಸಲ್ಮಾನ್ ಖಾನ್ ನಟನೆಯ 'ತೇರೆ ನಾಮ್' ಚಿತ್ರದಲ್ಲಿ 'ಲಗಾನ್ ಲಗಿ' ಡೈಸಿ ಶಾ ಹಿನ್ನೆಲೆ ನೃತ್ಯಗಾರರಾಗಿ ಕಾಣಿಸಿಕೊಂಡಿದ್ದಾರೆ. ರೂಪದರ್ಶಿಯಾಗಿ ಮತ್ತು ನೃತ್ಯಗಾರ್ತಿಯಾಗಿ ಖ್ಯಾತಿ ಗಳಿಸಿಕೊಂಡಿರುವ ಡೈಸಿ ಶಾ ಅವರು ಕನ್ನಡದ ಭದ್ರ, ಬಾಡಿಗಾರ್ಡ್, ಆಕ್ರಮಣ ಎಂಬ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದಕ್ಕೂ ಮುನ್ನ ಅವರು ಅನೇಕ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ.
![Top Bollywood stars who started out as background dancers](https://etvbharatimages.akamaized.net/etvbharat/prod-images/14819436_1_2607newsroom_1658841892_912.jpg)
ರಣವೀರ್ ಸಿಂಗ್: ಇವರು ಕೂಡ ಹಿನ್ನೆಲೆ ನೃತ್ಯಗಾರರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಕೆಲವು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ಕಭಿ ಖುಷ್ ಕಭಿ ಗಮ್ ಚಿತ್ರದ ಬೋಲೆ ಚೂಡಿಯನ್ ಹಾಡಿನಲ್ಲಿ ರಣವೀರ್ ನೃತ್ಯಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಜಾಹೀರಾತಿನಲ್ಲಿ ಕೆಲಸ ಮಾಡಿದರು ಅವರು 2010 ರಲ್ಲಿ ಯಶ್ ರಾಜ್ ಫಿಲ್ಮ್ಸ್‌ನ ರೊಮ್ಯಾಂಟಿಕ್ ಕಾಮಿಡಿ ಬ್ಯಾಂಡ್ ಬಾಜಾ ಬಾರಾತ್ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದೊಂದಿಗೆ ನಟನೆಗೆ ಪದಾರ್ಪಣೆ ಮಾಡಿದರು. ಸದ್ಯ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟರಲ್ಲಿ ಒಬ್ಬರಾಗಿದ್ದಾರೆ.
![Top Bollywood stars who started out as background dancers](https://etvbharatimages.akamaized.net/etvbharat/prod-images/280480598_118752460819876_2633241570879142621_n_2607newsroom_1658841892_607.jpg)
ಅರ್ಷದ್ ವಾರ್ಸಿ: ಇವರು ಬಾಲಿವುಡ್‌ನ ಜನಪ್ರಿಯ ಹಾಸ್ಯ ನಟರಲ್ಲಿ ಒಬ್ಬರು. ಆರಂಭದಲ್ಲಿ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಕಾಶ್ (1987) ನಲ್ಲಿ ಮಹೇಶ್ ಭಟ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅರ್ಷದ್, ರೂಪ್ ಕಿ ರಾಣಿ ಚೋರೋನ್ ಕಾ ರಾಜಾ (1993) ಚಿತ್ರದ ಒಂದು ಹಾಡಿಗೆ ನೃತ್ಯ ಸಂಯೋಜನೆ ಸಹ ಮಾಡಿದ್ದಾರೆ. 1996 ರಲ್ಲಿ ಬಿಡುಗಡೆಯಾದ ತೇರೆ ಮೇರೆ ಸಪ್ನೆ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅರ್ಷದ್ ವಾರ್ಸಿ ಓರ್ವ ಹಾಸ್ಯ ಕಲಾವಿದರಾಗಿ ಯಶಸ್ವಿಯಾದವರು.
![Top Bollywood stars who started out as background dancers](https://etvbharatimages.akamaized.net/etvbharat/prod-images/12184286_10_1803newsroom_1647587466_320_2607newsroom_1658841892_453.jpg)
ಕಾಜಲ್ ಅಗರ್ವಾಲ್: ಇವರು ಕೂಡ ಹಿನ್ನೆಲೆ ನೃತ್ಯಗಾರರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಕೆಲವು ಬಹುಭಾಷಾ ಸೆಲೆಬ್ರಿಟಿಗಳಲ್ಲಿ ಒಬ್ಬರು. ಕಾಜಲ್ ಅಗರ್ವಾಲ್ ಅವರು ಕ್ಯೋಂ ಹೋ ಗಯಾ ಎಂಬ ಚಿತ್ರದಲ್ಲಿ ಉಲ್ಜಾನೆ ಎಂಬ ಹಾಡಿನಲ್ಲಿ ಐಶ್ವರ್ಯಾ ರೈ ಪಕ್ಕದಲ್ಲಿ ನೃತ್ಯ ಮಾಡುವುದನ್ನು ಕಾಣಬಹುದು. ನಾಲ್ಕು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಇವರು ರೂಪದರ್ಶಿ ಕೂಡ ಆಗಿದ್ದವರು. ಐತಿಹಾಸಿಕ ಕಾದಂಬರಿಯಾಧಾರಿತ ತೆಲುಗು ಚಲನಚಿತ್ರ ಮಗಧೀರ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು.
ಇದೇ ರೀತಿಯ ಹಲವು ಸೆಲೆಬ್ರಿಟಿಗಳು ತಾವು ಹಿರಿಪರದೆಯಲ್ಲಿ ಕಾಣಿಸಿಕೊಳ್ಳುವುಕ್ಕೂ ಮುನ್ನ ನೃತ್ಯಗಾರರಾಗಿ, ಸಹಾಯಕ ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ ದುಡಿದ ಉದಾಹರಣೆಗಳಿವೆ. ಫರಾನ್ ಖಾನ್, ರೆಮೋ ಡಿಸೋಜ, ಸಾಜಿದ್ ಖಾನ್, ರಾಘವ ಲಾರೆನ್ಸ್ ಸೇರಿದಂತೆ ಅನೇಕರು ನೃತ್ಯಗಾರರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.