2024ನೇ ವರ್ಷ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಕಾಟೇರ ಸಿನಿಮಾದ ಅಭೂತಪೂರ್ವ ಯಶಸ್ಸಿನಿಂದಾಗಿ ಒಳ್ಳೆ ಶುಭಾರಂಭ ಎನ್ನಲಾಗಿತ್ತು. ಆದರೆ ಕಳೆದ ವಾರ 'ಒಂಟಿ ಬಂಟಿ', 'ಆದರ್ಶ ರೈತ' ಮತ್ತು 'ಆನ್‍ಲೈನ್ ಮದುವೆ ಆಫ್‍ಲೈನ್ ಶೋಭನ' ಎಂಬ ಮೂರು ಚಿತ್ರಗಳು ಬಿಡುಗಡೆಯಾಗಿದ್ದು, ಈ ಮೂರೂ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿವೆ.
ಇದೇ ಜನವರಿ 12ರಂದು ಬಿಡುಗಡೆಯಾಗಬೇಕಿದ್ದ ರಂಗಾಯಣ ರಘು ಹಾಗು ರಾಘವೇಂದ್ರ ರಾಜಕುಮಾರ್ ಅಭಿನಯದ ರಂಗ ಸಮುದ್ರ, ಚಿತ್ರ ಒಂದು ವಾರ ಮುಂದಕ್ಕೆ ಹೋಗಿದೆ. ಕಾರಣ ಈ ವಾರ ಕನ್ನಡ ಸಿನಿಮಾಗಳಿಗಿಂತ ಪರಭಾಷೆಯ ಸಿನಿಮಾಗಳ ಅಬ್ಬರ ಜೋರಾಗಿದೆ.
ಹೌದು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಏಳು ತೆಲುಗು ಮತ್ತು ತಮಿಳು ಚಿತ್ರಗಳು ಬಿಡುಗಡೆ ಆಗುತ್ತಿವೆ. ಅದರಲ್ಲಿ ಮಹೇಶ್ ಬಾಬು ಅಭಿನಯದ ಗುಂಟೂರು ಖಾರಂ ಚಿತ್ರ. ಸದ್ಯ ಟ್ರೈಲರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿರುವ ಗುಂಟೂರ್ ಖಾರಂ ಚಿತ್ರ ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ ಶ್ರೀಲೀಲಾ ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಈ ಕಾರಣಕ್ಕೆ ಗುಂಟೂರ್ ಖಾರಂ ಚಿತ್ರದ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ಇನ್ನು ಮಹೇಶ್ ಬಾಬು ಜೊತೆ ವೆಂಕಟೇಶ್ ಅಭಿನಯದ 'ಸೈಂಧವ', ನಾಗಾರ್ಜುನ ಅಭಿನಯದ 'ನಾ ಸಾಮಿ ರಂಗ', ಯುವ ನಟ ತೇಜ ಸಜ್ಜಾ ಅಭಿನಯದ 'ಹನುಮಾನ್' ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿವೆ. ಇದರ ಜೊತೆಗೆ ಧನುಷ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್, ಶಿವಕಾರ್ತಿಕೇಯನ್ ಅಭಿನಯದ 'ಆಯಲಾನ್' ಮತ್ತು ಅರುಣ್ ವಿಜಯ್ ಅಭಿನಯದ 'ಮಿಷನ್ ಚಾಪ್ಟರ್' 1 ಸಿನಿಮಾಗಳು ತೆರೆಗಪ್ಪಳಿಸಲಿವೆ.
ಈ ಎಲ್ಲಾ ಚಿತ್ರಗಳು ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಪರಭಾಷೆಯ ಚಿತ್ರಗಳು ಆಕ್ರಮಿಸಿಕೊಳ್ಳಲಿವೆ. ಸದ್ಯ ದರ್ಶನ್ ಅಭಿನಯದ 'ಕಾಟೇರ' ಚಿತ್ರವು ಹೌಸ್‍ಫುಲ್ ಪ್ರದರ್ಶನಗಳನ್ನು ಕಾಣುತ್ತಿದ್ದು, ಮಿಕ್ಕಂತೆ ಯಾವುದೇ ಕನ್ನಡ ಚಿತ್ರ ನಿಂತಿಲ್ಲ.
ಬಿಡುಗಡೆ ಆಗುತ್ತಿರುವ ಏಳು ಚಿತ್ರಗಳ ಪೈಕಿ ಮೂರು ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳಾಗಿದ್ದು, ಕನ್ನಡದಲ್ಲೂ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದರಲ್ಲೂ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ನಟ ಶಿವರಾಜಕುಮಾರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಗಳಿಗೆ ಸಮಾಧಾನ ಪಟ್ಟುಕೊಳ್ಳಬೇಕೇ ಹೊರತು, ಮಿಕ್ಕಂತೆ ಈ ವಾರ ಕನ್ನಡಕ್ಕಿಂತ ಪರಭಾಷಾ ಚಿತ್ರಗಳೇ ಕರ್ನಾಟಕದ ಚಿತ್ರಮಂದಿರಗಳಲ್ಲಿ ಅಬ್ಬರಿಸ ಸಜ್ಜಾಗಿವೆ.
ಇದನ್ನೂ ಓದಿ: ಮತ್ತೆ ಕಾಂಗರೂ ಸಿನಿಮಾದಲ್ಲಿ ಖಾಕಿ ತೊಟ್ಟು ಅಬ್ಬರಿಸಲಿರುವ ನಟ ಆದಿತ್ಯ