ಆರ್‌ಸಿ ಬ್ರದರ್ಸ್ ಕನ್ನಡ ಚಿತ್ರರಂಗದಲ್ಲಿ ಕ್ಯಾಚೀ ಟೈಟಲ್ ಸಿನಿಮಾ. ವಿಭಿನ್ನ ಪಾತ್ರಗಳಿಂದಲೇ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ತಬಲಾನಾಣಿ ಹಾಗೂ ಕುರಿಪ್ರತಾಪ್ ಅಣ್ಣ ತಮ್ಮನಾಗಿ ಬೆಳ್ಳಿ ತೆರೆಮೇಲೆ ಪ್ರೇಕ್ಷಕರನ್ನು ನಕ್ಕು ನಗಿಸಲು ಬರ್ತಾ ಇದ್ದಾರೆ. ಸಹೋದರರಿಬ್ಬರ ನಡುವಿನ ಬಾಂಧವ್ಯದ ಕಥೆಯನ್ನು ಹಾಸ್ಯಮಯ ಘಟನೆಗಳನ್ನಿಟ್ಟುಕೊಂಡು ನಿರೂಪಿಸಿರುವ ಚಿತ್ರ ಆರ್‌ಸಿ ಬ್ರದರ್ಸ್. ಈ ಚಿತ್ರಕ್ಕೆ ಪ್ರಕಾಶ್‌ಕುಮಾರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌ಕಟ್ ಹೇಳಿದ್ದಾರೆ.
ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರೋ ಆರ್‌ಸಿ ಬ್ರದರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಬಲನಾಣಿ ಹಾಗೂ ಕುರಿ ಪ್ರತಾಪ್ ಜೊತೆಗೆ ಸಂಭ್ರಮಶ್ರೀ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಹಾಗೂ ನೀತುರಾಯ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಪ್ರಕಾಶ್ ಕುಮಾರ್ ಮಾತನಾಡಿ, ಟ್ರೈಲರ್ಗಿಂತ ಹೆಚ್ಚು ಕ್ವಾಲಿಟಿ ಚಿತ್ರದಲ್ಲಿದೆ.
ಇಬ್ಬರು ಸಹೋದರರ ನಡುವೆ ನಡೆಯುವ ಹಾಸ್ಯಮಯ ಕಥೆಯಿದು. ತಬಲಾನಾಣಿ ಅವರು ಅದ್ಭುತವಾದ ಡೈಲಾಗ್‌ಗಳನ್ನು ಬರೆದಿದ್ದಾರೆ. ಸೋದರರ ನಡುವಿನ ಬಾಂಧವ್ಯ, ಕೆಲವಿಚಾರಕ್ಕೆ ಆಗುವ ಜಗಳ, ಮತ್ತೆ ಅದನ್ನು ನಿಭಾಯಿಸಿಕೊಂಡು ಅವರು ಹೇಗೆ ಜೊತೆಗಿರ‍್ತಾರೆ ಎಂಬುದನ್ನು ಹೇಳಿದ್ದೇವೆ. ಅಣ್ಣನಿಗೆ ಮದುವೆ ಆಗಿರಲ್ಲ, ತಮ್ಮನಿಗೆ ಮದುವೆ ಮಾಡಿಸುತ್ತಾರೆ. ನಂತರ ಅಣ್ಣ ಮದುವೆಯಾಗಬೇಕೆಂದು ಹೋದಾಗ ಏನೆಲ್ಲ ಸಮಸ್ಯೆ ಎದುರಿಸಬೇಕಾಗುತ್ತದೆ. ತನ್ನ ಬೇಜಾರು ಹೇಳಿಕೊಳ್ಳಲು ಆತನಿಗೆ ಯಾರೂ ಇರಲ್ಲ ಅನ್ನೋದು ಕತೆ. ಬೆಂಗಳೂರು ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಿಸಿದ್ದೇವೆ ಎಂದು ಹೇಳಿದರು.
- " class="align-text-top noRightClick twitterSection" data="">
ತಬಲಾನಾಣಿ ಮಾತನಾಡಿ, ಇದೊಂದು ಅಣ್ಣ ತಮ್ಮಂದಿರ ಕಥೆ. ನನ್ನ ತಮ್ಮ ಪೊಲೀಸ್ ಆಗಿದ್ದರೆ, ನಾನು ಕೆಲಸವಿಲ್ಲದವನು. ಹೆಣ್ಣು ಕೊಡೋಕೆ ಬಂದವರು ಮಗಳ ಸೇಫ್ಟಿ ನೋಡುತ್ತಾರೆ. ನನಗೆ ಹೆಣ್ಣು ಕೊಡಲು ಬಂದವರು ತಮ್ಮನನ್ನು ಕೇಳುತ್ತಾರೆ. ಆತನಿಗೆ ಮದುವೆಯಾದರೂ ಅಣ್ಣನ ಮದುವೆಯಾಗೋವರೆಗೆ ಪ್ರಸ್ತ ಮಾಡಿಕೊಳ್ಳಲ್ಲ ಎಂದಾಗ ಆತನ ಹೆಂಡತಿ ನನ್ನ ಮೇಲೆ ಕೋಪಿಸಿಕೊಳ್ಳುವುದು, ಜಗಳ ವಿರಸಗಳು ನಡೆಯುತ್ತದೆ. ಕೊನೆಯಲ್ಲಿ ಒಬ್ಬ ಮಹಿಳಾ ಪೊಲೀಸ್ ನನ್ನನ್ನು ಮದುವೆಯಾಗಲು ಒಪ್ಪಿ ಜೀವನ ಕೊಡುತ್ತಾಳೆ. ಡಿಒಪಿ, ಸಂಗೀತ ನಿರ್ದೇಶಕರು ಸೇರಿ ಇಡೀ ಟೀಮ್ ಸ್ನೇಹದಿಂದ ಕೆಲಸ ಮಾಡಿದೆ. ಇದು ನನ್ನ 125ನೇ ಚಿತ್ರ ಎಂದು ಹೇಳಿದರು.
ನಾಯಕಿ ಸಂಭ್ರಮಶ್ರೀ ಮಾತನಾಡಿ, ಮೊದಲ ಬಾರಿಗೆ ಪೊಲೀಸ್ ಪಾತ್ರ ಮಾಡಿದ್ದೇನೆ. ಕಂಪ್ಲೀಟ್ ಕಾಮಿಡಿ ಜೊತೆಗೆ ಎಮೋಷನ್ ಇರುವ ಚಿತ್ರವಿದು ಎಂದು ಹೇಳಿದರು. ಇನ್ನು ನಿರ್ಮಾಪಕ ಮಣಿ ಶಶಾಂಕ್ ಮಾತನಾಡಿ, ನಾನೊಬ್ಬ ಅಡ್ವೋಕೇಟ್. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಇಡೀ ಸಿನಿಮಾ ನಗಿಸುತ್ತಲೇ ಮೆಸೇಜ್ ಹೇಳುತ್ತದೆ. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು. ಮತ್ತೊಬ್ಬ ನಿರ್ಮಾಪಕ ಗಿರೀಶ್ ಮಾತನಾಡಿ, ನನ್ನದು ಕ್ರೀಡಾಕ್ಷೇತ್ರ. ನಾನು ಒಲಿಂಪಿಕ್ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದೇನೆ. ಮಣಿ ಶಶಾಂಕ್ ನನ್ನ ಗೆಳೆಯ. ಹಾಗಾಗಿ ಅವರೂ ನಾವು ಸೇರಿ ಈ ಚಿತ್ರವನ್ನು ನನ್ನ ಪತ್ನಿ ಸಹನಾ ಹೆಸರಿನಲ್ಲಿ ನಿರ್ಮಿಸಿದ್ದೇನೆ. ಇದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಚಿತ್ರ. ತಬಲಾನಾಣಿ, ಕುರಿಪ್ರತಾಪ್ ಕಾಂಬಿನೇಶನ್ ಅದ್ಭುತವಾಗಿ ಬಂದಿದೆ ಎಂದು ಹೇಳಿದರು.
ಈ ಚಿತ್ರದ ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಮಾತನಾಡಿ, ಸಿನಿಮಾದಲ್ಲಿ ಎಲ್ಲಾ ಥರದ ಎಲಿಮೆಂಟ್ ಇದೆ. ಚಿತ್ರದಲ್ಲಿ ಒಂದು ಮೆಲೋಡಿ ಸಾಂಗ್ ಹಾಗೂ ಪ್ರೊಮೋಷನಲ್ ಸಾಂಗ್ ಇದೆ ಎಂದರು. ಸಾಮಾಜಿಕ ಹೋರಾಟಗಾರ್ತಿ ರೇವತಿ ರಾಜ್ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಿರಣ್ ಕುಮಾರ್ ಈ ಚಿತ್ರದ ಛಾಯಾಗ್ರಾಹಕರು, ಮಣಿ ಶಶಾಂಕ್ ಈ ಚಿತ್ರದ ನಿರ್ಮಾಪಕರಾಗಿದ್ದು, ಸಹನಾ ಗಿರೀಶ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಸದ್ಯ ಟ್ರೈಲರ್ನಿಂದ ಸದ್ದು ಮಾಡುತ್ತಿರುವ ಆರ್‌ಸಿ ಬ್ರದರ್ಸ್ ಇದೇ ತಿಂಗಳು 26ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ: ಸ್ವತಂತ್ರ ಸಂಗ್ರಾಮದ ಸುಪ್ತ ನಾಯಕಿ 'ನೀರಾ ಆರ್ಯ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ