ವಿವಾದಗಳಿಂದಲೇ ಸದ್ದು ಮಾಡುವ ಶೋ ಅಂದ್ರೆ ಅದು "ಕಾಫಿ ವಿತ್ ಕರಣ್". ಇದನ್ನು ನಡೆಸುವ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಕಾರ್ಯಕ್ರಮಕ್ಕೆ ಬರುವ ನಟ, ನಟಿಯರ ವೈಯಕ್ತಿಕ ಜೀವನ, ಲೈಂಗಿಕ ಆಸಕ್ತಿ ಬಗ್ಗೆ ಪ್ರಶ್ನೆ ಕೇಳಿ ಮುಜುಗರ ಉಂಟು ಮಾಡುತ್ತಾರೆ. ಜೊತೆಗೆ ಇಂತಹ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿ ಸುದ್ದಿ ಮಾಡುವುದು ಕರಣ್ರ ಹಳೆಯ ಚಾಳಿ.
ಹೊಸದಾಗಿ ಆರಂಭವಾಗಿರುವ ಕಾಫಿ ವಿತ್ ಕರಣ್ 7ನೇ ಚರಣದಲ್ಲಿಯೂ ಹಳೆಯ ಚಾಳಿ ಮುಂದುವರಿಸಿರುವ ಬಾಲಿವುಡ್ ನಿರ್ಮಾಪಕ ಟೀಕೆಗೆ ಗುರಿಯಾಗಿದ್ದಾರೆ. ಶೋಗೆ ಬಂದ ನಟ ಅಮೀರ್ ಖಾನ್ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕರಣ್ರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೋಬಾರಾ ಸಿನಿಮಾ ಪ್ರಚಾರದ ವೇಳೆ ಬಾಲಿವುಡ್ ನಟಿ ತಾಪ್ಸಿ ಪನ್ನು ಕರಣ್ ಶೋಗೆ ನಿಮ್ಮನ್ನು ಏಕೆ ಆಹ್ವಾನಿಸಿಲ್ಲ ಎಂಬ ಪ್ರಶ್ನೆ ಕೇಳಲಾಗಿದೆ. ನಟಿ ಇದಕ್ಕೆ ಉತ್ತರವಾಗಿ "ನನ್ನ ಸೆಕ್ಸ್ ಲೈಫ್ ಕರಣ್ಗೆ ಆಹ್ವಾನಿಸುವಷ್ಟು ಆಸಕ್ತಿದಾಯಕವಾಗಿಲ್ಲ" ಎಂದು ಹೇಳಿದ್ದಾರೆ.
"ಕರಣ್ ತನ್ನ ಕಾರ್ಯಕ್ರಮದಲ್ಲಿ ಇಂಥಹದ್ದೇ ಪ್ರಶ್ನೆಗಳನ್ನು ಕೇಳುತ್ತಾರೆ. ನನ್ನ ಲೈಂಗಿಕ ಜೀವನ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸುವಷ್ಟು ವರ್ಣರಂಜಿತವಾಗಿಲ್ಲ. ಹಾಗಾಗಿ ಅವರು ನನ್ನನ್ನು ಈವರೆಗೂ ಕರೆದಿಲ್ಲ" ಎಂದು ತಾಪ್ಸಿ ಪನ್ನು ಹೇಳಿದ್ದಾರೆ.
ಕಾಫಿ ವಿತ್ ಕರಣ್ 7ನೇ ಚರಣ ಜುಲೈ 1 ರಿಂದ ಆರಂಭವಾಗಿದೆ. ಅನನ್ಯ ಪಾಂಡೆ, ವಿಜಯ್ ದೇವರಕೊಂಡ, ಜಾನ್ವಿ ಕಪೂರ್ ಸಾರಾ ಅಲಿ ಖಾನ್, ಕರೀನಾ ಕಪೂರ್ ಮತ್ತು ಅಮೀರ್ ಖಾನ್ ಸೇರಿದಂತೆ ವಿವಿಧ ಬಾಲಿವುಡ್ ಸ್ಟಾರ್ಸ್ ಭಾಗವಹಿಸಿದ್ದಾರೆ. ಈಚೆಗಷ್ಟೇ ವಿವಾಹವಾದ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರಿಗೆ ಕಾರ್ಯಕ್ರಮದಲ್ಲಿ ಕರಣ್ ಲೈಂಗಿಕ ಜೀವನದ ಬಗ್ಗೆ ಕೇಳಿದ್ದರು.