ಸಂಕ್ರಾಂತಿ ಹಬ್ಬ ಬಂತು ಅಂದರೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ನಡುವೆ ಸಿನಿಮಾಗಳ ಪೈಪೋಟಿ ಏರ್ಪಡುತ್ತಿತ್ತು. ಈ ಸಂಕ್ರಮಣ ಹಬ್ಬಕ್ಕೆ ಸ್ಟಾರ್ಗಳು ನನ್ನ ಸಿನಿಮಾ ಬಿಡುಗಡೆ ಆಗಬೇಕು ಎಂಬ ಕನಸು ಕಾಣುತ್ತಿದ್ದರು. ಮತ್ತೊಂದು ಕಡೆ ಸಿನಿಮಾ ಪ್ರೇಕ್ಷಕರು ಕೂಡ ಸಂಕ್ರಾಂತಿ ಹಬ್ಬಕ್ಕೆ ಯಾವ ಸ್ಟಾರ್ ನಟನ ಚಿತ್ರ ರಿಲೀಸ್ ಆಗುತ್ತಿದೆ ಎಂದು ವೇಟ್ ಮಾಡುತ್ತಿದ್ದರು. ಆದರೆ, ಈಗ ಟ್ರೆಂಡ್ ಚೇಂಜ್ ಆಗಿದ್ದು, ಈ ಸಂಕ್ರಾಂತಿ ಹಬ್ಬಕ್ಕೆ ಯಾವ ಸ್ಟಾರ್ ನಟನ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ.
ಯೆಸ್, ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳು ಇಲ್ಲದೇ ಹೊಸಬರ ಮೂರು ಚಿತ್ರಗಳು ಪ್ರೇಕ್ಷಕರ ಮುಂದೆ ಬರ್ತಾ ಇವೆ. ಈ ಸಾಲಿನಲ್ಲಿ ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಅರ್ಪಿಸುತ್ತಿರುವ ‘ಆರ್ಕೇಸ್ಟ್ರಾ ಮೈಸೂರು’ ಈ ವಾರ ತೆರೆಗೆ ಬರ್ತಾ ಇದೆ. ಟ್ರೈಲರ್ ನಿಂದಲೇ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ ಆರ್ಕೇಸ್ಟ್ರಾ ಮೈಸೂರು ಗುರುವಾರದಂದು ರಾಜ್ಯಾದ್ಯಂತ ತೆರೆ ಕಂಡಿದೆ.
ಆರ್ಕೇಸ್ಟ್ರಾ ಮೈಸೂರು: ಧನಂಜಯ್ ಗೆಳೆಯ ಬಳಗದಲ್ಲಿ ಗುರುತಿಸಿಕೊಂಡಿರುವ ಪೂರ್ಣಚಂದ್ರ ಮೈಸೂರು ಹಾಗೂ ರಾಜಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿರೋ ‘ಆರ್ಕೇಸ್ಟ್ರಾ ಮೈಸೂರು’ ಚಿತ್ರ ಸಿನಿಮಾ ಪ್ರಿಯರಿಗೆ ದರ್ಶನ ಕೊಟ್ಟಿದೆ. ಆರ್ಕೇಸ್ಟ್ರಾ ಕಲಾವಿದರ ಕಥೆ ಆಧರಿಸಿರುವ ಆರ್ಕೇಸ್ಟ್ರಾ ಮೈಸೂರು ಸಿನಿಮಾವನ್ನ ಸುನೀಲ್ ಮೈಸೂರು ನಿರ್ದೇಶನ ಮಾಡಿದ್ದಾರೆ. ಮೂಲತಃ ಮೈಸೂರಿನವರಾದ ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾ ಇದಾಗಿದೆ. ಅದರಲ್ಲೂ ಡಾಲಿ ಅವರೇ ಈ ಚಿತ್ರದ ಎಲ್ಲ ಹಾಡುಗಳನ್ನು ಬರೆದಿರುವುದು ವಿಶೇಷ.
ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗು ಮತ್ತೊಬ್ಬ ನಿರ್ಮಾಪಕ ಅಶ್ವಿನ್ ವಿಜಯ್ ಕುಮಾರ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದು, ಮಹದೇವ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಜೋಸೆಫ್ ಕೆ ರಾಜ ಅವರ ಸಂಕಲನವು ಈ ಚಿತ್ರದಲ್ಲಿದೆ, ಹೊಸತನದಿಂದ ಕೂಡಿರುವ ಆರ್ಕೇಸ್ಟ್ರಾ ಮೈಸೂರು ಚಿತ್ರಕ್ಕೆ ಸಿನಿಮಾ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಕು ಭಾಯ್ ಫಾಕ್ಸಿ ರಾಣಿ: ಇನ್ನು ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಹಾಗೂ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ, ಪಂಚಮಿ ರಾವ್ ಮುಖ್ಯ ಭೂಮಿಕೆಯರೋ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಗಗನ್ ಎಂ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ, ಟ್ರೈಲರ್ ನಿಂದಲೇ ಹೆಚ್ಚು ಭರವಸೆ ಮೂಡಿಸಿದೆ.
‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರದ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿ ಸಾಗುವ ಸ್ಟೋರಿ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಜೀವನದಲ್ಲಿ ನಡೆಯುವ ಪ್ರೇಮಕಥೆ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಈ ಪಾತ್ರಕ್ಕಾಗಿ ರೂಪೇಶ್ ಶೆಟ್ಟಿ ಎಂಟು ಕೆಜಿ ತೂಕ ಇಳಿಸಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿರೋ ಗೀತಾ ಭಾರತಿ ಹಾಗೂ ರೂಪೇಶ್ ಶೆಟ್ಟಿ ನಟನೆಗೆ ಪ್ರೇಕ್ಷಕರು ಎಷ್ಟು ಮಾಕ್ಸ್ ಕೊಡ್ತಾರೆ ಅನ್ನೋದು ಶುಕ್ರವಾರ ಗೊತ್ತಾಗಲಿದೆ.
ವಿರಾಟಪುರ ವಿರಾಗಿ: ಈ ಎರಡು ಕಮರ್ಷಿಯಲ್ ಸಿನಿಮಾಗಳ ಮಧ್ಯೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ. ಎಸ್. ಲಿಂಗದೇವರು ನಿರ್ದೇಶನದ ‘ವಿರಾಟಪುರ ವಿರಾಗಿ’ ಸಿನಿಮಾ ಕೂಡ ನಾಳೆ ವಿಶ್ವದ್ಯಾಂತ ತೆರೆ ಕಾಣುತ್ತಿದೆ. ಆಧುನಿಕ ಬಸವಣ್ಣ ಎಂದೇ ಜನಪ್ರಿಯರಾಗಿರುವ ಕುಮಾರ ಶಿವಯೋಗಿಗಳ ಕುರಿತು ಬಿ. ಎಸ್. ಲಿಂಗದೇವರು ಸಿನಿಮಾ ಮಾಡಿದ್ದಾರೆ. ಶಿಕ್ಷಣ, ಸಂಗೀತ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ ಕುಮಾರ ಶಿವಯೋಗಿಗಳ ಬದುಕನ್ನು ತೆರೆಮೇಲೆ ಲಿಂಗದೇವರು ತರುತ್ತಿದ್ದಾರೆ. ಕುಮಾರ ಶಿವಯೋಗಿಗಳ ಅವರ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ.
ಈ ಸಿನಿಮಾ ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಹರಿಕಾರರಾದ ಕುಮಾರ ಶಿವಯೋಗಿಗಳ ಜೀವನಾಧಾರಿತ ಕಥೆಯನ್ನ ಈ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದು, ಅಶೋಕ್ ವಿ. ರಾಮನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಗುಣಶೇಖರನ್ ಅವರ ಸಂಕಲನ ಈ ಚಿತ್ರಕ್ಕಿದೆ. ಶಿವಯೋಗಿಗಳ ಜೀವನ ಕಥೆಗೆ ಪ್ರೇಕ್ಷಕರು ಯಾವ ರೀತಿ ರೆಸ್ಪಾನ್ಸ್ ಮಾಡ್ತಾರೆ ಅನ್ನೋದು ಶುಕ್ರವಾರ ಗೊತ್ತಾಗಲಿದೆ.
ಹೊಸ ವರ್ಷದ ಆರಂಭದಲ್ಲಿ ಬರೋಬ್ಬರಿ 8 ಸಿನಿಮಾಗಳು ಬಿಡುಗಡೆ ಆಗುವ ಮೂಲಕ ಹೊಸವರ್ಷದ ಹೊಸ್ತಿಲಲ್ಲೇ ದಾಖಲೆ ಬರೆದಿತ್ತು. ಆದರೆ ಈ ವಾರ ಕನ್ನಡದಲ್ಲಿ ಮೂರು ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಆದರೆ, ಈ ಸಂಕ್ರಾಂತಿ ಹಬ್ಬಕ್ಕೆ ಕನ್ನಡದ ಯಾವ ಸ್ಟಾರ್ ನಟನ ಸಿನಿಮಾ ಬಿಡುಗಡೆ ಆಗುತ್ತಿಲ್ಲ ಎನ್ನುವುದೇ ಸಿನಿ ಪ್ರಿಯರಿಗೆ ಬೇಸರದ ಸಂಗತಿ.
ಇದನ್ನೂ ಓದಿ: ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ಇಡುವಂತೆ ಫಿಲ್ಮ್ ಚೇಂಬರ್ನಿಂದ ಬಿಬಿಎಂಪಿಗೆ ಮನವಿ