ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ಮರುದಿನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಟೈಟಲ್ ಘೋಷಣೆಯಾಗಿದೆ. ಈ ಚಿತ್ರಕ್ಕೆ 'ಲೀಡರ್ ರಾಮಯ್ಯ' ಎಂಬ ಹೆಸರನ್ನು ಇಡಲಾಗಿದ್ದು ಜನರಿಂದಲೇ ಬೆಳೆದ ರಾಜ ಎಂಬ ಉಪ ಶೀರ್ಷಿಕೆ ಕಾಣಬಹುದಾ ಪೋಸ್ಟರ್ ಬಿಡುಗಡೆ ಆಗಿದೆ ರಾಮನವಮಿ ಅಂಗವಾಗಿ ಇಂದು ಸಿದ್ದರಾಮಯ್ಯ ಅವರ ಮನೆ ಮುಂದೆ ಈ ಚಿತ್ರದ ಪೋಸ್ಟರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಲೀಡರ್ ರಾಮಯ್ಯ ಪೋಸ್ಟರ್: ಮೈಸೂರು ತಾಲೂಕು ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಅವರ ಮೇಲೆ ಪೊಲೀಸರು ಲಾಠಿ ಬೀಸುತ್ತಿರುವ ದೃಶ್ಯವನ್ನು ಪೋಸ್ಟರ್ನಲ್ಲಿ ಕಾಣಬಹುದು. ಈ ಘಟನೆ ಮೂಲಕ ಸಿದ್ದರಾಮಯ್ಯ ಹೇಗೆ ರಾಜ್ಯ ರಾಜಕೀಯದಲ್ಲಿ ಪಾದಾರ್ಪಣೆ ಮಾಡಿದರು. ಅವರ ಜೀವನಕ್ಕೆ ಈ ಘಟನೆ ತಿರುವು ನೀಡಿದ ಘಟನೆ ಪೋಟೋ ಮೂಲಕ ಅಭಿಮಾನಿಗಳನ್ನು ಸೆಳೆಯಲಾಗಿದೆ.
ಸಿದ್ದರಾಮಯ್ಯ ಅವರ ಜೀವನ ಆಧಾರಿತ ಸಿನಿಮಾ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಣೆ ಮಾಡಿತ್ತು. ನಿರ್ದೇಶಕ ಸತ್ಯ ರತ್ನಮ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದು, ಸಿದ್ದರಾಮಯ್ಯ ಪಾತ್ರಕ್ಕಾಗಿ ನಟ ವಿಜಯ್ ಸೇತುಪತಿ ಜೊತೆ ಮಾತುಕತೆ ನಡೆಯುತ್ತಿದ್ದು, ಈ ಬಗ್ಗೆ ಇನ್ನೂ ಅಂತಿಮವಾಗಿಲ್ಲ.
ಕಮರ್ಷಿಯಲ್ ಟಚ್: ರಾಜಕಾರಣಿಗಳ ಸಿನಿಮಾ ಎಂದರೆ ಸಾಮಾನ್ಯವಾಗಿ ಸಾಕ್ಷ್ಯ ಚಿತ್ರದಂತಿರುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ ಈ ಸಿನಿಮಾ ಸಂಪೂರ್ಣವಾಗಿ ವಿಭಿನ್ನ ಆಗಿರಲಿದೆ. ಸಿದ್ದರಾಮಯ್ಯ ಅವರ ಬಾಲ್ಯ, ವಿದ್ಯಾರ್ಥಿ ಜೀವನ, ವೃತ್ತಿ ಜೊತೆಗೆ ರಾಜಕೀಯ ಜೀವನದ ಏಳು ಬೀಳುಗಳ ಕಥಾನಕವನ್ನು ಚಿತ್ರ ಬಿಂಬಿಸಲಿದೆ. ವಿಶೇಷ ಎಂದರೆ ಅವರ ಪ್ರೀತಿ ಜೀವನದ ಕುರಿತು ಕೂಡ ಸಿನಿಮಾದಲ್ಲಿ ಬಿಂಬಿಸುವ ಮೂಲಕ ಚಿತ್ರಕ್ಕೆ ಕಮರ್ಷಿಯಲ್ ಟಚ್ ನೀಡಲಾಗಿದೆ. ಈ ಚಿತ್ರ ಮುಂದಿನ ತಿಂಗಳಿನಿಂದ ಸಿನಿಮಾ ಶೂಟಿಂಗ್ ಆರಂಭಿಸಲಿದ್ದು, ಸಿದ್ದರಾಮಯ್ಯ ಜನ್ಮದಿನವಾದ ಆಗಸ್ಟ್ 3ರಂದು ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
ಅಭಿಮಾನಿಗಳ ಪ್ರಯತ್ನ: ಕೊಪ್ಪಳದ ಕನಕಗಿರಿ ಕ್ಷೇತ್ರದ ಯುವ ಸಿದ್ದರಾಮಯ್ಯ ಅಭಿಮಾನಿಗಳು ನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಗಂಗಾವತಿ ತಾಲೂಕಿನ ಕನಕಗಿರಿಯ ಹೆಬ್ಬಾಳ ಗ್ರಾಮದ ಯುವ ನಿರ್ಮಾಪಕ ಹಯಾತ್ ಪೀರ್ ಮತ್ತು ಅಭಿಮಾನಿಗಳು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೀವನಾಧಾರಿತ ಬಯೋಪಿಕ್ ಅನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಸುಮಾರು 50 ಕೋಟಿ ರೂ. ಬಜೆಟ್ನಲ್ಲಿ ಚಿತ್ರ ನಿರ್ಮಾಣಕ್ಕೆ ಯೋಜನೆ ನಡೆಯುತ್ತಿದ್ದು, ಎಂಎಸ್ ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ.
ಇನ್ನು ಈ ಸಿನಿಮಾದಲ್ಲಿ ಸಿದ್ದರಾಮಯ್ಯ ಅವರು ನಟಿಸಿಲ್ಲ. ತೆರೆಮೇಲೆ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸುವ ಸಾಧ್ಯತೆ ಇದೆ. ಅವರು ನಟಿಸಲು ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಮಾಹಿತಿ ಅಧಿಕೃತವಾಗಿ ಹೊರಬಿದ್ದಿಲ್ಲ.
ಇದನ್ನೂ ಓದಿ: ರಾಮ ನವಮಿಯಂದೇ ಪ್ರಭಾಸ್ ಅಭಿನಯದ 'ಆದಿಪುರುಷ್' ಪೋಸ್ಟರ್ ಬಿಡುಗಡೆ