ಮುಂಬೈ: ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್ ಮತ್ತು ಆದಿತ್ಯ ರಾಯ್ ಕಪೂರ್ ಸೇರಿದಂತೆ ಹಲವಾರು ಬಾಲಿವುಡ್ ನಟರಿಗೆ ಈಗಾಗಲೇ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಇದೀಗ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದಕ್ಕೆ ಕಾರಣ ಕಳೆದ ವಾರ ನಿರ್ಮಾಪಕ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿ ಎಂಬ ಸುದ್ದಿ ಹರಿದಾಡುತ್ತಿದೆ.
ಬಾಲಿವುಡ್ನಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಕೊರೊನಾಗೆ ತುತ್ತಾಗುತ್ತಿರುವುದು ಕಳವಳ ಉಂಟು ಮಾಡಿದೆ. ಸತತವಾಗಿ ಎಲ್ಲರಿಗೂ ಕೊರೊನಾ ಪಾಸಿಟಿವ್ ಬರುತ್ತಿರುವುದಕ್ಕೆ ಕರಣ್ ಜೋಹರ್ ನೀಡಿದ ಪಾರ್ಟಿಯೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಕರಣ್ ಜೋಹರ್ ಅವರ ಮನೆ ಕೋವಿಡ್ ಹಾಟ್ ಸ್ಪಾಟ್ ಆಗಿದೆ ಎಂದು ದೂಷಿಸಲಾಗಿದೆ.
ಇದಲ್ಲದೇ, ಪಾರ್ಟಿಗೆ ಬಂದವರಲ್ಲಿ ಸುಮಾರು 40 -50 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡುಬಂದಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಕರಣ್ ಜೋಹರ್ ಅವರ ಆಪ್ತರು ಇದನ್ನು ನಿರಾಕರಿಸಿದ್ದಾರೆ. ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ಮನೆ ಕೋವಿಡ್ ಹಾಟ್ಸ್ಪಾಟ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕರಣ್ ಜೋಹರ್ ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಔತಣಕೂಟವನ್ನು ಆಯೋಜಿಸಿದ್ದರು. ಇದರಲ್ಲಿ ಸಲ್ಮಾನ್, ಶಾರುಖ್, ಅನನ್ಯಾ ಪಾಂಡೆ, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಐಶ್ವರ್ಯಾ ರೈ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಓದಿ: ಹತ್ಯೆ ಮಾಡುವುದಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಪತ್ರ!