ಅಭಿಮಾನಿಗಳ ಒಂದು ಹಂತದ ಕಾಯುವಿಕೆ ಕೊನೆಗೊಂಡಿದೆ. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಜವಾನ್' ಟ್ರೇಲರ್ ಇಂದು ರಿಲೀಸ್ ಆಗಿದೆ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವಂತಿರುವ ಟ್ರೇಲರ್ ವೀಕ್ಷಿಸಿದ ಸಿನಿಪ್ರಿಯರಿಗೆ ಸಿನಿಮಾ ಮೇಲಿನ ಕುತೂಹಲವೂ ಜಾಸ್ತಿಯಾಗಿದೆ. ಜವಾನ್ ಬಿಡುಗಡೆಗೆ ಇನ್ನೊಂದು ವಾರ ಬಾಕಿ ಉಳಿದಿದ್ದು, ಟ್ರೇಲರ್ ಅನಾವರಣಗೊಳಿಸುವ ಮೂಲಕ ಚಿತ್ರತಂಡ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಸೆಪ್ಟೆಂಬರ್ 7ರಂದು ಜವಾನ್ ಅದ್ದೂರಿಯಾಗಿ ತೆರೆಕಾಣಲಿದೆ. ಉತ್ತರದ ಸ್ಟಾರ್ ನಟ ಶಾರುಖ್ ಖಾನ್ ಹಾಗೂ ದಕ್ಷಿಣದ ಸ್ಟಾರ್ ನಟಿ ನಯನತಾರಾ ಕಾಂಬಿನೇಶನ್ನ ಮೂಡಿ ಬರ್ತಿರುವ ಚೊಚ್ಚಲ ಚಿತ್ರವಿದು. ಅಟ್ಲೀ ಆ್ಯಕ್ಷನ್ ಕಟ್ ಹೇಳಿರುವ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಬಾಲಿವುಡ್ ಮಸಾಲಾ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳನ್ನೂ ಒಳಗೊಂಡಿದೆ.
ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದ ಪಠಾಣ್ ಸಿನಿಮಾ ಬಳಿಕ ಇದೇ ವರ್ಷ ತೆರೆಕಾಣುತ್ತಿರುವ ಶಾರುಖ್ ಖಾನ್ ಅವರ ಎರಡನೇ ಚಿತ್ರವಿದು. ಬಾಲಿವುಡ್ನಲ್ಲಿ 3 ದಶಕ ಪೂರೈಸಿರುವ ನಟನ ಎರಡನೇ ಆ್ಯಕ್ಷನ್ ಸಿನಿಮಾ ಕೂಡಾ ಹೌದು. ರೊಮ್ಯಾಂಟಿಕ್ ಹೀರೋ ಎಂದೇ ಗುರುತಿಸಿಕೊಂಡಿರುವ ಎಸ್ಆರ್ಕೆ 2023ರ ಜನವರಿ ಕೊನೆಯಲ್ಲಿ ತೆರೆಕಂಡ ಪಠಾಣ್ನಲ್ಲಿ ಮೊದಲ ಬಾರಿಗೆ ಆ್ಯಕ್ಷನ್ ಅವತಾರ ತಾಳಿದ್ದರು. ಪಠಾಣ್ 1,000 ಕೋಟಿ ರೂ. ಕ್ಲಬ್ ಸೇರುವಲ್ಲಿ ಯಶಸ್ವಿ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಶೇರ್ ಮಾಡಿರುವ ಬಾಲಿವುಡ್ ಬಾದ್ಶಾ, ''ನ್ಯಾಯ ಮತ್ತು ಜವಾನ್. ಮಹಿಳೆಯರು ಮತ್ತು ಅವರ ಪ್ರತೀಕಾರ. ಹುಡುಗ ಮತ್ತು ಅವನ ಅಮ್ಮ. ಹೆಚ್ಚು ಮನರಂಜನೆ'' ಎಂಬ ವಿಭಿನ್ನ ಕ್ಯಾಪ್ಷನ್ ಕೊಟ್ಟಿದ್ದಾರೆ. ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಶಾರುಖ್ ಖಾನ್ ಅವರ ವಾಯ್ಸ್ ಓವರ್ ಮೂಲಕ ಟ್ರೇಲರ್ ಪ್ರಾರಂಭವಾಗುತ್ತದೆ. ರಾಜ ಎಂದು ಉಲ್ಲೇಖಿಸಿ ವ್ಯಕ್ತಿಯ ಕಥೆ ಹೇಳಲು ಪ್ರಾರಂಭಿಸುತ್ತಾರೆ. ಒಂದರ ಹಿಂದೊಂದರಂತೆ ತಮ್ಮ ಎಲ್ಲಾ ಯುದ್ಧಗಳನ್ನು ಸೋತ ರಾಜನ ಕಥೆ ಇದೆಂಬುದು ಅರಿವಾಗುತ್ತದೆ. ನಂತರ ಟ್ರೇಲರ್ನಲ್ಲಿ ನಮ್ಮ ಮುಂದೆ ಬರುವ ಸೀನ್ 'ಹೈಜಾಕ್'. ಕೋಪದಲ್ಲಿರುವ ಯುವಕ ಮುಂಬೈಯನ್ನು ಹೈಜಾಕ್ ಮಾಡುತ್ತಿದ್ದಾನೆ ಎಂಬ ವಿಚಾರ ಗಮನಕ್ಕೆ ಬರುತ್ತದೆ. ಅದು ಬೇರಾರೂ ಅಲ್ಲ, ಶಾರುಖ್ ಖಾನ್. ಜವಾನ್ ಏನೋ ಮಾಸ್ಟರ್ ಪ್ಲ್ಯಾನ್ ಮಾಡುತ್ತಾನೆ, ಅದನ್ನು ತಡೆಯಲು ನಯನತಾರಾ ಮುಂದಾಗುತ್ತಾರೆ. ಹೀಗೆ ಟ್ರೇಲರ್ ರೋಚಕವಾಗಿದೆ. ನಿಖರ, ಸಂಪೂರ್ಣ ಕಥೆ ತಿಳಿದುಕೊಳ್ಳಲು ಸಿನಿಮಾವನ್ನೇ ವೀಕ್ಷಿಸಬೇಕು.
ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವರು ಪ್ರಮುಖ ಪಾತ್ರ ಮಾಡಿದ್ದಾರೆ. ಸ್ಪೆಷಲ್ ರೋಲ್‌ನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಿನಿಮಾ ನಿರ್ಮಿಸುತ್ತಿದೆ.