ತಿರುವನಂತಪುರಂ (ಕೇರಳ): ಮಾಲಿವುಡ್ ಚಿತ್ರರಂಗಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಹಿರಿತೆರೆ ಮತ್ತು ಕಿರುತೆರೆಯಲ್ಲಿ ಮಿಂಚಿದ್ದ ಖ್ಯಾತ ನಟಿ ಬದುಕಿಗೆ ವಿದಾಯ ಹೇಳಿದ್ದಾರೆ. ಕಿರಿ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಮಲಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಆಗಸ್ಟ್ ತಿಂಗಳಲ್ಲಿ ನಟಿ ಅಪರ್ಣಾ ನಾಯರ್ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ದೇವರ ನಾಡಲ್ಲಿ ಮತ್ತೋರ್ವ ನಟಿ ಶವವಾಗಿ ಪತ್ತೆಯಾಗಿದ್ದಾರೆ.
ಮಲಯಾಳಂ ಸಿನಿಮಾ ಮತ್ತು ಧಾರಾವಾಹಿ ನಟಿ ರಂಜುಷಾ ಮೆನನ್ (35) ತಿರುವನಂತಪುರಂನ ಶ್ರೀಕಾರ್ಯಂ ಕರಿಯಂನಲ್ಲಿರುವ ಫ್ಲಾಟ್ನಲ್ಲಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಹಣಕಾಸಿನ ಸಮಸ್ಯೆಯಿಂದ ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಚ್ಚಿ ಮೂಲದ ರಂಜುಷಾ ತಮ್ಮ ಪತಿಯೊಂದಿಗೆ ಬಾಡಿಗೆ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು. ರಂಜುಷಾ ಮೆನನ್ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು. ಸ್ತ್ರೀ, ಮಗಳುಡೆ ಅಮ್ಮ, ನಿಜಲಟ್ಟಂ, ಬಾಲಮಣಿ ಇವರ ಅಭಿನಯದ ಪ್ರಸಿದ್ಧ ಸೀರಿಯಲ್ಗಳು. ರಂಜುಷಾ ಕೆಲವು ಚಿತ್ರಗಳಲ್ಲೂ ಅಭಿನಯಿಸಿದ್ದರು. ಮೇರಿಕುಂಡೋರು ಕುಂಜಾದ್, ಸಿಟಿ ಆಫ್ ಗಾಡ್, ಲಿಸಮ್ಮಂದೆ ಹೌಸ್, ಬಾಂಬೆ ಮಾರ್ಚ್ 12, ತಲಪ್ಪಾವು, ವಾಧ್ಯಾರ್ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಲಿವುಡ್ನ ಖ್ಯಾತ ನಟ
ಇತ್ತೀಚಿನ ಪ್ರಕರಣ - ಅಪರ್ಣಾ ನಾಯರ್ ಶವ ಪತ್ತೆ: ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟಿ ಅಪರ್ಣಾ ನಾಯರ್ ಆಗಸ್ಟ್ 31ರ ಸಂಜೆ 7 ಗಂಟೆ ಸುಮಾರಿಗೆ ರಾಜಧಾನಿ ತಿರುವನಂತಪುರಂನ ಕರಮಾನ ತಾಲಿಯಾಲ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಪರ್ಣಾ ನಾಯರ್ ಅವರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ತಿರುವನಂತಪುರಂನಲ್ಲಿ ವಾಸವಾಗಿದ್ದರು. ಅವರಿಗೆ 31 ವರ್ಷ ವಯಸ್ಸಾಗಿತ್ತು. ನಟಿ ಸಂಜಿತ್ ಎಂಬುವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳು ಸಹ ಇವರಿಗೆ ಇದ್ದಾರೆ.
2005 ರಲ್ಲಿ ಮಯೂಖಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಪರ್ಣಾ ನಾಯರ್, ಬಳಿಕ ರನ್ ಬೇಬಿ ರನ್, ಸೆಕೆಂಡ್ಸ್, ಅಚಾಯನ್ಸ್, ಮೇಘತೀರ್ಥಂ, ಮುದ್ದುಗೌ, ಕಾರ್ಟ್ ಸಮಕ್ಷಮ ಬಾಲನ್ ವಕೀಲ, ಕಲ್ಕಿ ಮುಂತಾದ ಚಿತ್ರಗಳಲ್ಲಿ ಮತ್ತು ಚಂದನಮಜ ಮತ್ತು ಆತ್ಮಸಖಿಯಂತಹ ಧಾರಾವಾಹಿಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ: Poojapura Ravi: 800 ಸಿನಿಮಾಗಳಲ್ಲಿ ನಟಿಸಿದ್ದ ಪೂಜಾಪುರ ರವಿ ಇನ್ನಿಲ್ಲ..